

ರಾಮನಗರ : ಜಿಲ್ಲೆಯ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ಸಂಜೆ 31ನೇ ಲಕ್ಷದೀಪೋತ್ಸವ ಮಳೆಯ ಸಿಂಚನದ ನಡುವೆಯೂ ಸಡಗರ ಸಂಭ್ರಮದಿಂದ ನೆರವೇರಿತು.
ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ರೇವಣಸಿದ್ದೇಶ್ವರ ಬೆಟ್ಟದಲ್ಲಿ ಸುತ್ತಮುತ್ತಲ ಸೇವಾ ಗ್ರಾಮಗಳು ಭಕ್ತರು, ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ಜಿಲ್ಲೆ ಹೊರ ಜಿಲ್ಲೆಯ ಭಕ್ತರ ಸಮ್ಮುಖದಲ್ಲಿ ಲಕ್ಷದೀಪೋತ್ಸವ ಅದ್ದೂರಿಯಾಗಿ ನಡೆದು ಬರುತ್ತಿದೆ.
ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಧಿಕಾರಿಗಳು, ಗಣ್ಯರು ದೀಪ ಅಂಟಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಅಕ್ಕಪಕ್ಕದ ಸೇವಾ ಗ್ರಾಮಗಳಿಂದ ಬಂದ ಭಕ್ತರು ವಿಶೇಷವಾಗಿ ಹೆಣ್ಣುಮಕ್ಕಳು ಎಣ್ಣೆ ಬತ್ತಿ ಅಂಟಿಸಿ ಭಕ್ತಿಭಾವದಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುನೀತರಾದರು. ರಾಮನಗರ ಗ್ರಾಮಾಂತರ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಹುಲಿಕೆರೆ-ಗುನ್ನೂರು ಗ್ರಾಪಂ ವತಿಯಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳದಲ್ಲಿ ಅಗ್ನಿಶಾಮಕದಳ ಮತ್ತು ತುರ್ತು ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಲಾಗಿತ್ತು.
ಬೆಟ್ಟದ ರಥದ ಬೀದಿ, ಪ್ರಮುಖ ದೇವಾಲಯಗಳು, ವಿಶೇಷವಾಗಿ ವಿದ್ಯುತ್ ದೀಪಾಲಂಕಾರಗಳು ತಳಿರು ತೋರಣಗಳಿಂದ ಅಲಂಕಾರಗೊಂಡು ಬೆಟ್ಟದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದು ಬಣ್ಣ ಬಣ್ಣದ ವಿದ್ಯುತ್ ದೀಪಗಳು ದೀಪೋತ್ಸವಕ್ಕೆ ಮತ್ತಷ್ಟು ಕಳೆಕಟ್ಟಿತ್ತು.
ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಬಿ. ತೇಜಸ್ವಿನಿ, ಇಒ ಪ್ರದೀಪ್, ಮುಜರಾಯಿ ತಹಸೀಲಾರ್ ಖಾನ್, ದೇವಾಲಯದ ಇಒ ಕೆ.ಕೆ. ರಮ್ಯಾ, ಮುಖಂಡರಾದ ಶಿವಲಿಂಗಯ್ಯ, ತಮ್ಮಣ್ಣ, ಎ.ಸಿ. ಕೆಂಪಯ್ಯ, ಪುಟ್ಟಸಿದ್ದಯ್ಯ, ನಂದೀಶ್‌ಗೌಡ, ಗಂಗಾಧರ್ ಪಿಡಿಇ ಕುಮಾರ್, ರವಿ, ಗುರುಪ್ರಸಾದ್, ಪಾರುಪತ್ತೇದಾರ್ ಸೋಮಶೇಖರ್ ಇದ್ದರು.
ದೀಪೋತ್ಸವದಲ್ಲಿ ಭಾಗವಹಿಸಿದ್ದ ಗಣ್ಯರು: ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಕೆ. ರಾಜು, ಪ್ರಾಧಿಕಾರ ಅಧ್ಯಕ್ಷ ಎ ಬಿ ಚೇತನ್ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ. ಎಚ್. ರಾಜು, ಗ್ರಾಪಂ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಗ್ರಾಪಂ ಸದಸ್ಯರಾದ ಮಹದೇವಯ್ಯ, ನಾಗೇಶ್, ನಿಂಗರಾಜು, ನಾಗೇಂದ್ರನಾಯ್ಕ, ತೇಜ, ದೇವರಾಜಮ್ಮ, ಬೇಬಿ ಬಾಯಿ, ಲಕ್ಷ್ಮಮ್ಮ ಇದ್ದರು.
ದಾಸೋಹ : ರೇವಣಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್‌ನಿಂದ ದಾಸೋಹ ಭವನದಲ್ಲಿ ಮತ್ತು ದಾಸೋಹ ಮಠದ ಬಸವಲಿಂಗರಾಜ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠದ ಆವರಣದಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಟ್ರಾಫಿಕ್ ಜಾಮ್ : ಬೆಟ್ಟಕ್ಕೆ ಸಂಜೆ 6 ಗಂಟೆ ನಂತರ ತುಮಕೂರು, ಬೆಂಗಳೂರು ಕಡೆಯಿಂದ ಹೆಚ್ಚಿನ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ವಾಹನಗಳ ಸಾಲು ಸಾಲು ಕಂಡಿತು. ಅವ್ವೇರಹಳ್ಳಿಯಿಂದ ಬೆಟ್ಟದವರೆಗೂ ರಸ್ತೆ ಜಾಮ್ ಆಗಿತ್ತು. ಪೊಲೀಸರು ಹೆಜ್ಜೆ ಹೆಜ್ಜೆಗೂ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಳೆ : ತಮಿಳುನಾಡಿನಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಭಾನುವಾರ ಬೆಳಗಿನಿಂದಲೂ ಬಿಸಿಲು ಕಾಣದೆ ಮೋಡ ಕವಿದ ವಾತಾವರಣ ಇತ್ತು. ಸಂಜೆ 4 ಗಂಟೆಯಿಂದ ಪ್ರಾರಂಭವಾದ ಮಳೆ ರಾತ್ರಿ 8 ಆದರೂ ನಿಲ್ಲಲಿಲ್ಲ. ನಂತರ ದೀಪಗಳಲ್ಲಿ ತುಂಬಿದ್ದ ನೀರನ್ನು ಚೆಲ್ಲಿ ದೀಪ ಹಚ್ಚಿ ಜನ ಸಂತಸ ಪಟ್ಟರು.