

ಬೆಳಗಾವಿ: ಇಲ್ಲಿನ ಸಂಗೊಳ್ಳಿ ರಾಯಣ್ಣ ಕೋ&ಆಪರೇಟಿವ್ ಸೊಸೈಟಿ ಹಾಗೂ ಬಸವೇಶ್ವರ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ ಇರಿಸಿದ್ದ ಠೇವಣಿ ಹಣ ತಣವೇ ಮರಳಿಸಬೇಕು ಎಂದು ಆಗ್ರಹಿಸಿ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಾವು ಎರಡೂ ಸೊಸೈಟಿಗಳಲ್ಲಿ ಠೇವಣಿ ಇರಿಸಿದ್ದೆವು. ಆದರೆ, ಅವಧಿ ಮುಗಿದರೂ ನಮಗೆ ಹಣ ಮರುಪಾವತಿಸಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೆವು. ನಮಗೆ ಠೇವಣಿ ಹಣ ಮರುಪಾವತಿಸುವಂತೆ ಗ್ರಾಹಕರ ನ್ಯಾಯಾಲಯವೂ ಆದೇಶಿಸಿತ್ತು. ಇದಕ್ಕೆ ಪೂರಕವಾಗಿ ದಾಖಲೆ ಸಂಗ್ರಹಿಸಿದ್ದರು. ಆದರೆ, 6 ಸಾವಿರಕ್ಕೂ ಅಧಿಕ ಗ್ರಾಹಕರ ದಾಖಲೆ ಸರಿ ಇಲ್ಲವೆಂದು ಸಮ ಪ್ರಾಧಿಕಾರವು ಅರ್ಜಿ ತಿರಸ್ಕರಿಸಿತ್ತು. ಏನೇ ತೊಡಕುಗಳನ್ನು ಬಗೆಹರಿಸಿ, ಎಲ್ಲ ಠೇವಣಿದಾರರಿಗೂ ಹಣ ಮರಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆ ಈಡೇರದಿದ್ದರೆ ಮಾರ್ಚ್ 11ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಠೇವಣಿದಾರರ ಪರ ವಕೀಲ ಎನ್.ಆರ್.ಲಾತೂರ ಎಚ್ಚರಿಕೆ ನೀಡಿದರು. ಲಾಲಸಿಂಗ್ ಬಿಲಾವರ, ನಾರಾಯಣ ಶಿವಟಣಕರ, ನಾರಾಯಣ ಬೀರನಗಡ್ಡಿ ಇತರರಿದ್ದರು.