

ಗುಡಿಬಂಡೆ: ಪಟ್ಟಣ ಪಂಚಾಯಿತಿ ವಾಣಿಜ್ಯ ಅಂಗಡಿ ಮಳಿಗೆಗಳಿಗೆ ಅವೈಜ್ಞಾನಿಕವಾಗಿ ಠೇವಣಿ ನಿಗದಿ ಮಾಡಿರುವುದರಿಂದ ಅಂಗಡಿ -ಮಳಿಗೆಗಳು ಖಾಲಿಖಾಲಿಯಾಗಿಯೇ ಉಳಿಯುವಂತಾಗಿದೆ.
ಹೌದು. ಹೆಚ್ಚಿನ ಠೇವಣಿ ನಿಗದಿ ಮಾಡಿರುವುದರಿಂದ ಹರಾಜು ಪ್ರಕ್ರಿಯೆಯಲ್ಲಿ ವರ್ತಕರು ಭಾಗವಹಿಸಿಲ್ಲ. ಆದ್ದರಿಂದ ಹಲವು ವರ್ಷಗಳಿಂದ ಅಂಗಡಿ- ಮಳಿಗೆಗಳು ಖಾಲಿಯಾಗಿಯೇ ಉಳಿದಿವೆ. ಇದರಿಂದ ಪಟ್ಟಣ ಆಡಳಿತದ ಆದಾಯಕ್ಕೆ ಹೊಡೆತ ಬಿದ್ದಿದೆ.
ಪಟ್ಟಣ ದಲ್ಲಿರುವ ಸುಮಾರು 22 ಅಂಗಡಿ ಮಳಿಗೆಗಳಲ್ಲಿ 13 ಅಂಗಡಿ ಮಳಿಗೆಗಳು ಹರಾಜು ಆಗಿದ್ದು, 9 ಅಂಗಡಿ ಮಳಿಗೆಗಳು ಹಲವು ವರ್ಷಗಳಿಂದ ಖಾಲಿಯಿವೆ. ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆದಾಯದ ಮೂಲವಾಗಿರುವ ಈ ಅಂಗಡಿ-ಮಳಿಗೆಗಳು ಹಲವು ವರ್ಷಗಳಿಂದ ಹರಾಜು ಆಗಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ ಆದಾಯ ಕುಂಠಿತವಾಗಿದೆ. ಇದರಿಂದ ಪೌರಕಾರ್ಮಿಕರಿಗೆ ಸೇರಿ ಹೊರಗುತ್ತಿಗೆ ನೌಕರರಿಗೆ ವೇತನ ನೀಡಲೂ ಪರದಾಡುವ ದುಸ್ಥಿತಿ ಪಟ್ಟಣ ಪಂಚಾಯಿತಿಗೆ ಎದುರಾಗಿದೆ.
ಆಡಳಿತಾಂಗದ ವೈಲ್ಯ?
ಪಟ್ಟಣದಲ್ಲಿರುವ ಖಾಲಿ ಅಂಗಡಿ ಮಳಿಗೆಗಳ ಬಿಡ್‌ಗೆ ಎರಡು ಬಾರಿ ಹರಾಜು ಪ್ರಕ್ರಿಯೆ ಮಾಡಿದ್ದು, 9 ಅಂಗಡಿಗಳಿಗೆ ಯಾರೂ ಹರಾಜು ಪಡೆಯಲು ಮುಂದೆ ಬಂದಿಲ್ಲ. ಈ ಸಮಸ್ಯೆಗೆ ಏನು ಕಾರಣ ಎಂದು ಅರಿಯಲು ಇದುವರೆಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮುಂದಾಗಿಲ್ಲ. ಇನ್ನಾದರೂ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕಡಿಮೆ ಠೇವಣಿ ನಿಗದಿ ಪಡಿಸಬೇಕೆಂಬ ಕೂಗು ಜೋರಾಗಿದೆ.
ಖಾಸಗಿ ಅಂಗಡಿಗಳಿಗೆ ₹30-40 ಸಾವಿರ
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಅಂಗಡಿ ಮಳಿಗೆಗಳಿಗೆ ₹30 ಸಾವಿರದಿಂದ 40 ಸಾವಿರ ಮಾತ್ರ ಠೇವಣಿ ನಿಗದಿ ಮಾಡಿದ್ದಾರೆ. ಆದರೆ ಪಂಪಂ ಮಾತ್ರ ಎಲ್ಲೋ ವಾರ್ಡ್‌ಗಳಲ್ಲಿರುವ ಅಂಗಡಿ ಮಳಿಗೆಗಳಿಗೂ ₹ 1 ಲಕ್ಷ ಠೇವಣಿ ನಿಗದಿ ಮಾಡಿದರೆ ಹೇಗೆ?, ಕೂಡಲೇ ಅಧಿಕಾರಿಗಳು ಠೇವಣಿಗೆ ಹಣ ಕಡಿಮೆ ಮಾಡಿ, ಹರಾಜು ಕರೆದರೆ ಪಪಂ ಅಂಗಡಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯುವುದಾಗಿ ಬಹುತೇಕ ವರ್ತಕರು ಹೇಳುತ್ತಿದ್ದಾರೆ.
ಅವೈಜ್ಞಾನಿಕ ನಿಗದಿಯೇ ಕಾರಣ?
ಸರ್ಕಾರದ ಆದೇಶದಂತೆ ಪ್ರತಿ ಅಂಗಡಿ ಮಳಿಗೆಗೆ 1 ಲಕ್ಷ ರೂ. ಠೇವಣಿ ನಿಗದಿ ಮಾಡಲಾಗಿದೆ. ಆದರೆ, ಬಹುತೇಕ ಮಳಿಗೆಗಳು ಮುಖ್ಯರಸ್ತೆಯಲ್ಲಿಲ್ಲ. ಇರುವುದರಿಂದ ಹೆಚ್ಚು ಠೇವಣಿ ಇಟ್ಟು ಹರಾಜಿನಲ್ಲಿ ಕಟ್ಟಡವನ್ನು ಬಾಡಿಗೆ ಪಡೆದರೂ ವ್ಯಾಪಾರ ಆಗುವುದಿಲ್ಲ. ಆದರೂ ಹೆಚ್ಚಿನ ಬಾಡಿಗೆ ನೀಡಬೇಕೆಂದು ವಾರ್ತಕರು ಅಂಗಡಿ-ಮಳಿಗೆಗಳ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.
ಪ.ಪಂ ಅಂಗಡಿಗಳು ಹರಾಜು ಆಗದೇ ಖಾಲಿ ಇರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಗಮನಕ್ಕೂ ತರಲಾಗಿದೆ. ಠೇವಣಿ ಹಣ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ, ಠೇವಣಿ ಹಣ ಕಡಿಮೆ ಮಾಡಿಸಿ ನಂತರ ಹರಾಜು ಪ್ರಕ್ರಿಯೆಗೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಹರಾಜು ಮಾಡಿಸಲಾಗುತ್ತದೆ.- ಎ.ವಿಕಾಸ್ ಪ.ಪಂ ಅಧ್ಯಕ್ಷ, ಗುಡಿಬಂಡೆ
ಪಟ್ಟಣ ಪಂಚಾಯಿತಿ ವಾಣಿಜ್ಯ ಅಂಗಡಿ ಮಳಿಗೆಗಳಿಗೆ ಹೆಚ್ಚು ಠೇವಣಿ ನಿಗದಿ ಮಾಡಿದ್ದಾರೆ. ಪ್ರತಿ ಅಂಗಡಿ ಮಳಿಗೆಗೆ ₹ 1 ಲಕ್ಷ ಠೇವಣಿ ಪಾವತಿಸಿದರೆ ಸಾಮಾನ್ಯ ವ್ಯಾಪಾರಸ್ಥರು ವ್ಯಾಪಾರ ಮಾಡುವುದಾದರೂ ಹೇಗೆ? ಪ.ಪಂ ಅಧಿಕಾರಿಗಳು ಈ ಕೂಡಲೇ ಠೇವಣಿ ಇಳಿಸಬೇಕು. ಸಾಮಾನ್ಯ ವ್ಯಾಪಾರಸ್ಥನಿಗೂ ಕೈಗೆಟುಕುವಷ್ಟು ದರದಲ್ಲಿ ಅಂಗಡಿಗಳು ಬಾಡಿಗೆಗೆ ಸಿಗಬೇಕು.- ಮಹಮದ್ ನಾಸೀರ್, ಗುಡಿಬಂಡೆ ನಿವಾಸಿ.