

ಕಾರವಾರ: ಹೆಚ್ಚು ಮತ ಪಡೆಯಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದು ಗೊತ್ತಿದೆ. ಅದೇ ರೀತಿ ಈಗ ಚುನಾವಣೆ ಆಯೋಗ ಕೂಡ ವೋಟಿಂಗ್ ಪ್ರಮಾಣ ಹೆಚ್ಚಿಸಲು ಹಲವು ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳದಲ್ಲಿ ಶೇ. 77.5, ಕಾರವಾರ-73, ಕುಮಟಾ-80.5, ಭಟ್ಕಳ-77.1, ಶಿರಸಿ-81.3, ಯಲ್ಲಾಪುರ-82.6 ಹಾಗೂ ಜಿಲ್ಲೆಯಲ್ಲಿ ಸರಾಸರಿ ಶೇ. 78.4 ರಷ್ಟು ಮತದಾನವಾಗಿತ್ತು. 11.33 ಲಕ್ಷ ಮತದಾರರ ಪೈಕಿ, 8.88 ಲಕ್ಷ ಮತದಾರರು ಮತ ಚಲಾಯಿಸಿದ್ದರು.
ಈ ಬಾರಿ ಅದನ್ನು ಶೇ. 10 ರಷ್ಟಾದರೂ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವೀಪ್ ಕಾರ್ಯಕ್ರಮದ ಅಡಿ ಮತದಾನ ಜಾಗೃತಿ ಮೂಡಿಸಲು ನಿರಂತರವಾಗಿ ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ಕಳೆದ ಎಂಎಲ್‌ಎ ಹಾಗೂ ಎಂಪಿ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆಗಳನ್ನು ಗುರುತಿಸಿ ಅವುಗಳನ್ನು ಕೇಂದ್ರೀಕರಿಸಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಈ ಹಿಂದಿನ ಚುನಾವಣೆಗಳಲ್ಲಿ ಕೇವಲ ಜಾಗೃತಿ ಜಾಥಾಗಳಿಗೆ ಸೀಮಿತವಾಗಿದ್ದ ಸ್ವೀಪ್ ಚಟುವಟಿಕೆ ಈಗ ಜನರನ್ನು ಸೆಳೆಯಬಲ್ಲ ಯಕ್ಷಗಾನ, ಸುಗ್ಗಿ, ಸಿದ್ದಿಗಳ ಡಮಾಮಿ, ಗೊಂಡರ ನೃತ್ಯಗಳಿಗೂ ವಿಸ್ತರಿಸಿದೆ.
ಜಿಪಂ, ಎಲ್ಲ ತಾಪಂ ಹಾಗೂ 229 ಗ್ರಾಪಂಗಳೂ ಈ ಮತದಾನ ಜಾಗೃತಿ ಕಾರ್ಯದಲ್ಲಿ ನಿರತವಾಗಿವೆ.
ಜಾತ್ರೆ, ಸಮಾರಂಭಗಳಲ್ಲೂ ಮತದಾನ ಜಾಗೃತಿ ನಡೆಯುತ್ತಿದೆ. ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.
ಇದುವರೆಗೆ ಜಿಲ್ಲೆಯಲ್ಲಿ 1700ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚುನಾವಣೆ ಬರುವವರೆಗೆ ಒಟ್ಟೂ ಎರಡೂವರೆ ಸಾವಿರ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಶಾಲೆಗಳ ಗೋಡೆಗಳು, ಬಸ್ ನಿಲ್ದಾಣಗಳಲ್ಲಿ ಗಮನ ಸೆಳೆಯುವಂತೆ ಭಿತ್ತಿ ಚಿತ್ರಗಳನ್ನು ಬಿಡಿಸಲಾಗಿದೆ. ಹಸೆ ಚಿತ್ತಾರ ಹಾಗೂ ಹೊಸ ಾಂಟ್ (ಅಕ್ಷರದ ಸ್ವರೂಪ) ಬಳಸಿ ಜನರ ಗಮನ ಸೆಳೆಯಲಾಗುತ್ತಿದೆ. ಎಲ್ಲೆಡೆ ಸೆಲ್ಫಿ ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಜನರ ಗಮನ ಸೆಳೆಯುವಂಥ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ.