

ಕಾರವಾರ :ಇಲ್ಲಿನ ಕ್ರಿಮ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ(department of oncology) ಸ್ಥಾಪನೆ ಖಚಿತ ವಾಗಿದ್ದು, ಫೆ.28 ಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, 35 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಫೆ.28 ರಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಕಾರವಾರಕ್ಕೆ ಆಗಮಿಸಲಿದ್ದು, ರೇಡಿಯೋ ಥೆರಪಿ ಲೀನಾಕ್ ಉಪಕರಣದ ಬಂಕರ್‌ನ್ನು ಶಂಕು ಸ್ಥಾಪನೆ ನೆರವೇರಿಸುವರು ಎಂದು ಅವರು ತಿಳಿಸಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗಾಗಿ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಜಿಲ್ಲೆಯ ಜನ ತೆರಳುವ ತೊಂದರೆ ತಪ್ಪಲಿದೆ ಎಂದು ಅವರು ವಿವರಿಸಿದದ್ದಾರೆ.
ಜಿಲ್ಲೆಗೆ ಟ್ರಾಮಾ ಸೆಂಟರ್ ಬೇಡಿಕೆಯೂ ಶೀಘ್ರದಲ್ಲಿಯೇ ಈಡೆರಲಿದೆ. ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಕಾರವಾರದ ಪ್ರವಾಸೋದ್ಯಮ ಕಚೇರಿ ಹಾಗೂ ಆರ್‌ಟಿಒ ಕಚೇರಿ ಸ್ಥಳಾಂತರಿಸಲಾಗುತ್ತಿದೆ. ಅಲ್ಲಿ ಟ್ರಾಮಾ ಸೆಂಟರ್ ನಿರ್ಮಾಣದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.