

ಸಿಬ್ಬಂದಿ ಕೊರತೆಯೇ ಸಮಸ್ಯೆ - ಭರ್ತಿಯಾಗದ ಹುದ್ದೆ ಕ್ರಮಕ್ಕೆ ಮುಂದಾಗದ ಸರ್ಕಾರ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕೃಷಿ ಇಲಾಖೆ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದ್ದು, ರೈತರ ಪಾಲಿನ ಪ್ರಮುಖ ಕೇಂದ್ರವಾಗಿದೆ. ಆದರೆ, ರೈತರಿಗೆ ಮಳೆ ಕೊರತೆಯಿಂದ ಬರ ಉಂಟಾಗಿರುವಂತೆ, ಈಗ ಕೃಷಿ ಇಲಾಖೆಗೂ ಸಿಬ್ಬಂದಿ ಬರ ಎದುರಾಗಿದೆ.
ಇಲಾಖೆಯಲ್ಲಿ ಹಲವು ವರ್ಷಗಳಿಂದಲೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಎದುರಾಗಿದ್ದು, ಇದನ್ನು ಸರಿಪಡಿಸಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಕೃಷಿ ಇಲಾಖೆ ಸಿಬ್ಬಂದಿ ಕೊರತೆ ಕಾರಣದಿಂದಾಗಿಯೇ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು ರೈತರಿಗೆ ಸವಾಲಾಗಿದೆ. ಫ್ರೂಟ್ ಐಡಿ ಸೃಜನೆಯಲ್ಲಿಯೂ ಇಲಾಖೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂತು. ಕೊನೆಗೆ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಯ ಸಿಬ್ಬಂದಿಯನ್ನು ಬಲವಂತವಾಗಿ ನಿಯೋಜಿಸಿ ಫ್ರೂಟ್ ಐಡಿ ಸೃಜಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೆ ಕೃಷಿ ಇಲಾಖೆ ಪ್ರಮುಖ ಇಲಾಖೆ ಆಗಿರುವುದರಿಂದ ಇಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಕಡಿಮೆ ಪ್ರಮಾಣದಲ್ಲಿ ಇರಬಹುದು ಎನ್ನುವ ಅಂದಾಜು ರೈತ ಸಮುದಾಯದ್ದು. ವಿಪರ್ಯಾಸ ಎಂದರೆ ಬೇರೆ ಎಲ್ಲ ಇಲಾಖೆಗಳಿಗಿಂತ ಹೆಚ್ಚಿನ ಸಿಬ್ಬಂದಿ ಕೊರತೆ ಕೃಷಿ ಇಲಾಖೆಯಲ್ಲಿಯೇ ಇದೆ ಎನ್ನುವುದು ಆಶ್ಚರ್ಯ.
ಇಲಾಖೆಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಸಿಬ್ಬಂದಿ ಕೊರತೆ ಇದೆ. ತಾಂತ್ರಿಕ ಮತ್ತು ತಾಂತ್ರಿಕೇತರ ಮಂಜೂರಾತಿ ಹುದ್ದೆಗಳಿಗೂ, ಭರ್ತಿ ಆಗಿರುವ ಹುದ್ದೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಜಿಲ್ಲೆಯ ಕೃಷಿ ಇಲಾಖೆಗೆ ತಾಂತ್ರಿಕ ಮತ್ತು ತಾಂತ್ರಿಕೇತರ ಒಟ್ಟು 169 ಸಿಬ್ಬಂದಿ ಮಂಜೂರಾಗಿದೆ. ಆದರೆ ಭರ್ತಿ ಆಗಿರುವುದು ಮಾತ್ರ 40 ಹುದ್ದೆಗಳು. ಉಳಿದಂತೆ 129 ಹುದ್ದೆಗಳು ಖಾಲಿ ಉಳಿದಿವೆ.
ಸಿಬ್ಬಂದಿ ಕೊರತೆ ಕೃಷಿ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಿದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ತೆಗೆ ಕಾಲಕಾಲಕ್ಕೆ ರೈತರಿಗೆ ತರಬೇತಿ, ಕೀಟ ಬಾಧೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕಾದ ಇಲಾಖೆ, ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದೆ. ಇನ್ನೂ ಬರ ಮತ್ತು ಅತಿವೃಷ್ಟಿ ಸಂದರ್ಭದಲ್ಲಿಯೂ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾದ ಜವಾಬ್ದಾರಿ ಇಲಾಖೆ ಮೇಲೆಯೇ ಬೀಳುವುದರಿಂದ ಇರುವ ಸಿಬ್ಬಂದಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗದೆ, ರೈತರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿದೆ.
ಕೃಷಿ ಇಲಾಖೆಗೆ ಪ್ರಮುಖವಾಗಿ ಬೇಕಾಗಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಕ್ಷೇತ್ರ ಸಿಬ್ಬಂದಿ (ಫೀಲ್ಡ್ ಸ್ಟಾಪ್) ಇಲ್ಲದೆ ಇರುವುದು. ಜಿಲ್ಲೆಯಲ್ಲಿ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಿವೆ. ಪ್ರತಿ ಆರ್‌ಎಸ್‌ಕೆಗೆ ಓರ್ವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಅಗತ್ಯವಿದೆ. ಆದರೆ, ಜಿಲ್ಲೆಯಲ್ಲಿ ಕೇವಲ 5 ಕೃಷಿ ಅಧಿಕಾರಿಗಳು ಇದ್ದಾರೆ. ಇವರಿಗೆ 2-3 ಆರ್‌ಎಸ್‌ಕೆಗಳ ಜವಾಬ್ದಾರಿ ನೀಡಲಾಗಿದೆ. ಇನ್ನು ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 55 ಹುದ್ದೆ ಮಂಜೂರು ಮಾಡಲಾಗಿದೆಯಾದರೂ, ಒಂದೇ ಒಂದು ಹುದ್ದೆಯೂ ಭರ್ತಿ ಆಗದಿರುವುದು ಇರುವ ಸಿಬ್ಬಂದಿ ಕೆಲಸದ ಒತ್ತಡ ಹೆಚ್ಚಿಸಿದೆ. ಈ ಅಧಿಕಾರಿಗಳೇ ರೈತರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿ, ಅವರಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಜತೆಗೆ, ಅರಿವು ಮೂಡಿಸುವ ಕೆಲಸ ಮಾಡುತ್ತಾರೆ.
ದೇಶವೇ ಕೃಷಿ ಪ್ರಧಾನವಾಗಿರುವ ಕಾರಣ ಕೃಷಿ ಇಲಾಖೆ ಸಿಬ್ಬಂದಿ ಕೊರತೆಗೆ ಮುಕ್ತಿ ಕಾಣಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಒಂದು ವೇಳೆ ಕೃಷಿ ಇಲಾಖೆ ಸಿಬ್ಬಂದಿ ಕೊರತೆ ನೀಗಿಸದಿದ್ದರೆ ಭವಿಷ್ಯದಲ್ಲಿ ಆಹಾರ ಉತ್ಪಾದನೆ ನಿರೀಕ್ಷಿತ ಗುರಿ ತಲುಪಲು ಇದುವೇ ಅಡ್ಡಗಾಲು ಆಗಬಹುದು. 2018ರಲ್ಲಿ ಕೆಲವು ಸಿಬ್ಬಂದಿ ನೇಮಕಗೊಂಡು ಜಿಲ್ಲೆಗೆ ಆಗಮಿಸಿದ್ದು, ಬಿಟ್ಟರೆ ನಂತರ ಯಾವುದೇ ನೇಮಕಾತಿ ಕಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ಇಲಾಖೆಗೆ ಬೇಕಾದ ಅಗತ್ಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಿಸುವ ಮೂಲಕ ಸಿಬ್ಬಂದಿ ಬರಕ್ಕೆ ಮುಕ್ತಿ ಹಾಡಬೇಕಿದೆ.
ಹುದ್ದೆಗಳು ಮಂಜೂರು ಭರ್ತಿ ಖಾಲಿ
ತಾಂತ್ರಿಕ 99 21 78
ತಾಂತ್ರಿಕೇತರ 70 19 51
ಒಟ್ಟು 169 40 129
ಕೃಷಿ ಇಲಾಖೆಯಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಈ ಮಾಹಿತಿಯನ್ನು ಕೇಂದ್ರ ಕಚೇರಿಗೂ ನೀಡಲಾಗಿದೆ.
ಎನ್.ಅಂಬಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ