ಶಾಲಾ ಆರಂಭಕ್ಕೆ ಇಲಾಖೆ ಸಜ್ಜು; 31ರಿಂದ ಪುನರಾರಂಭ

school111
Published on

ಎನ್.ಮುನಿವೆಂಕಟೇಗೌಡ ಕೋಲಾರ
ಬೇಸಿಗೆ ರಜೆ ಪೂರ್ಣಗೊಂಡಿದ್ದು, ಜಿಲ್ಲಾದ್ಯಂತ ಮೇ 31ರಿಂದ ಶೈಕ್ಷಣಿಕ ವರ್ಷದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿಗಳು ಪುನರಾರಂಭಗೊಳ್ಳಲಿವೆ. ಇದಕ್ಕಾಗಿ ಶಿಕ್ಷಣ ಇಲಾಖೆಯೂ ಸಿದ್ಧತೆ ನಡೆಸಿದ್ದು, ಪಠ್ಯಪುಸ್ತಕ, ಸಮವಸ ವಿತರಣೆ ಸೇರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಮುಂದಾಗಿದೆ.

ಮೇ 29ರಿಂದಲೇ ಶಿಕ್ಷಕರು ಶಾಲೆಗಳಿಗೆ ತೆರಳಿ ಶಾಲಾವರಣ ಸ್ವಚ್ಛತೆ ಮತ್ತು ಇನ್ನಿತರ ವ್ಯವಸ್ಥೆ ಕಲ್ಪಿಸುವ ಜತೆಗೆ ಮೇ 31ರಿಂದ ತರಗತಿ ಆರಂಭಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಶಾಲೆಗೆ ಆಗಮಿಸುವ ಮಕ್ಕಳನ್ನು ಬರಮಾಡಿಕೊಳ್ಳಲು ಅಗತ್ಯ ತಯಾರಿ ನಡೆಸುವಂತೆ ಈಗಾಗಲೇ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಶಾಲೆಯ 82,810 ವಿದ್ಯಾರ್ಥಿಗಳಿಗೆ ಶಾಲಾರಂಭದ ದಿನವೇ ಪಠ್ಯಪುಸ್ತಕ ಹಾಗೂ ಸಮವಸ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನುದಾನಿತ ಶಾಲೆಯ 18,843 ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊರತುಪಡಿಸಿ ಉಚಿತ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 1,06,934 ವಿದ್ಯಾಥಿಗಳಿಗೆ ಆಯಾ ಖಾಸಗಿ ಶಾಲೆಯ ಮುಖ್ಯಸ್ಥರೇ ಪಠ್ಯಪುಸ್ತಕ ಖರೀದಿಸಬೇಕಿದೆ. ವಿವಿಧ ವಸತಿ ನಿಲಯಗಳಲ್ಲಿ ಓದುತ್ತಿರುವ 8,646 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರಗಳನ್ನು ಆಯಾ ವಸತಿ ನಿಲಯಗಳ ಮೇಲ್ವಿಚಾರಕರು ನೀಡಲಿದ್ದಾರೆ.

ಕೊಠಡಿ ನಿರ್ಮಾಣ ಕಾಮಗಾರಿ ಶೇ.90 ಪೂರ್ಣ
ಕಳೆದ 2 ವರ್ಷಗಳ ಹಿಂದೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದವು. 2022 ಮತ್ತು 2023ನೇ ಸಾಲಿನ ಸರ್ವೇ ನಡೆಸಿ 426 ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಕೊಠಡಿಗಳ ನಿರ್ಮಾಣ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, ತಿಂಗಳೊಳಗಾಗಿ ಎಲ್ಲ ಕೊಠಡಿಗಳು ನಿರ್ಮಾಣಗೊಂಡು ಬಳಕೆಗೆ ಲಭ್ಯವಾಗಲಿವೆ ಎಂದು ಇಲಾಖೆ ತಿಳಿಸಿದೆ. ಅಂತೆಯೇ, ಮಳೆಯಿಂದ ಶಿಥಿಲಗೊಂಡಿದ್ದ 344 ಕೊಠಡಿಗಳನ್ನು 4 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ.

691 ಕಾಯಂ ಶಿಕ್ಷಕರ ಕೊರತೆ
ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 529 ಹಾಗೂ ಪ್ರೌಢಶಾಲೆಗಳಲ್ಲಿ 162 ಕಾಯಂ ಶಿಕ್ಷಕರ ಕೊರತೆಯಿದ್ದು ಕಳೆದ ವರ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ವರ್ಷವೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎನ್ನುತ್ತಾರೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ.

ಖಾಸಗಿ ಶಾಲೆಯತ್ತ ಒಲವು
ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಸೇರಿ ಎಲ್ಲ ಮೂಲಸೌಲಭ್ಯ ಒದಗಿಸಿದ್ದರೂ ಕಳೆದ ವರ್ಷದ
ಅಂಕಿ-ಅಂಶಗಳ ಪ್ರಕಾರ ಸರ್ಕಾರಿ, ಅನುದಾನಿತ ಹಾಗೂ ವಿವಿಧ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಿಂತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ವರ್ಷದ ದಾಖಲಾತಿಯಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಶಾಲಾ ಕಟ್ಟಡಗಳ ಪರಿಸ್ಥಿತಿ ಅವಲೋಕನಕ್ಕೆ ಸರ್ವೇ
ಪ್ರಸಕ್ತ ಸಾಲಿನಲ್ಲಿ 158 ಕೊಠಡಿಗಳ ದುರಸ್ತಿ ಮತ್ತು 403 ಶೌಚಗೃಹ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನರೇಗಾ ಯೋಜನೆಯಡಿ 342 ಶೌಚಗೃಹ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಶಾಲೆ ಪ್ರಾರಂಭಗೊಂಡ ನಂತರ ಮತ್ತು ದುರಸ್ತಿ ಅವಲೋಕಿಸಲು ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ವೇ ನಡೆಸಲಾಗುತ್ತದೆ. ಸದ್ಯದ ಪರಿಸ್ಥಿತಿ ಪ್ರಕಾರ 150 ಹೊಸ ಕೊಠಡಿಗಳ ನಿರ್ಮಾಣ ಹಾಗೂ 400 ಕೊಠಡಿಗಳ ದುರಸ್ತಿ ಕಾರ್ಯ ಅವಶ್ಯಕತೆ ಕಂಡುಬರುತ್ತಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಪ್ರಥಮ ಬಾರಿಗೆ ಈ ವರ್ಷವೇ ಶಾಲೆಗಳ ಪ್ರಾರಂಭ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಭಾಗ್ಯ ಕಲ್ಪಿಸಿಕೊಟ್ಟಿದೆ. ಶೇ.95 ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೆ ರವಾನೆಯಾಗಿವೆ. ಶೇ.5 ವಿಷಯಾಧಾರಿತ ಪಠ್ಯಪುಸ್ತಕಗಳು ಸರ್ಕಾರದಿಂದ ಬರಬೇಕಾಗಿದೆ. ವಾರದೊಳಗಾಗಿ ಆ ಪಠ್ಯಪುಸ್ತಕಗಳು ಬರಲಿವೆ. ಸದ್ಯಕ್ಕೆ ಶಾಲಾ ಕೊಠಡಿಗಳ ಸ್ಥಿತಿಗತಿ ಉತ್ತಮವಾಗಿದೆ. ಶಾಲೆಗಳು ಪ್ರಾರಂಭವಾದ ನಂತರ ಸರ್ವೇ ನಡೆಸಲಾಗುವುದು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕೊಠಡಿಗಳು ಪೂರ್ಣಗೊಂಡರೆ ಕೊಠಡಿಗಳ ಕೊರತೆ ಸ್ವಲ್ಪಮಟ್ಟಿಗೆ ನೀಗಲಿದೆ. ಇನ್ನು ಅವಶ್ಯಕತೆ ಇರುವ ಕೊಠಡಿಗಳ ಕೊರತೆ ಹಾಗೂ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೃಷ್ಣಮೂರ್ತಿ, ಡಿಡಿಪಿಐ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net