

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಚಾರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಪ್ರತಿ ವರ್ಷ ರಸ್ತೆ ಹಾಳಾಗುತ್ತಿದೆ. ಪ್ರತಿ ವರ್ಷವೂ ತಾತ್ಕಾಲಿಕ ದುರಸ್ತಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆಯೇ ಹೊರತು ಸಮಸ್ಯೆ ಬಗೆಹರಿಯುತ್ತಿಲ್ಲ. ಉತ್ತಮ ರಸ್ತೆ ನಿರ್ಮಾಣ ಮಾಡುವಲ್ಲಿ ಪಿಡಬ್ಲ್ಯೂಡಿ ಇಲಾಖೆ ವಿಫಲವಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿ ರಸ್ತೆ ಹಾಳಾಗುವುದನ್ನು ತಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನಿತೀಶ್ ಎಸ್.ಪಿ. ಆಗ್ರಹಿಸಿದರು.
ಹೆಬ್ರಿ ತಾಲೂಕು ಆಡಳಿತ ವತಿಯಿಂದ ಬುಧವಾರ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಮನವಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತ ಎಸ್‌ಪಿ ಕುಮಾರ್ ಮಾತನಾಡಿ, ಯಾರನ್ನೂ ಸತಾಯಿಸದೆ ಕಾನೂನು ಚೌಕಟ್ಟಿನಲ್ಲಿ ತ್ವರಿತವಾಗಿ ಕೆಲಸಗಳನ್ನು ಮಾಡಿಕೊಡಬೇಕು. ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನರಿಗೆ ಮಾಹಿತಿ ನೀಡಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಔಷಧಗಳನ್ನು ಬಿಪಿಎಲ್ ಕಾರ್ಡ್ ಹೊಂದಿದ್ದ ರೋಗಿಯು ಹೊರಗಿನಿಂದ ತಂದಾಗ ಅದರ ಹಣವನ್ನು ರೀಫಂಡ್ ಮಾಡಬೇಕೆಂಬ ನಿಯಮವಿದೆ. ಯಾವುದೇ ಆಸ್ಪತ್ರೆಗಳು ಇದನ್ನು ಮಾಡುತ್ತಿಲ್ಲ. ಜನರಿಗೆ ಗೊತ್ತಿಲ್ಲದಾಗ ಅದನ್ನು ತಿಳಿಸುವುದು ಆಸ್ಪತ್ರೆ ಸಿಬ್ಬಂದಿ ಕರ್ತವ್ಯ ಎಂದು ಎಸ್‌ಪಿ ಕುಮಾರ್ ಹೇಳಿದರು.
ಲೋಕಾಯುಕ್ತರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡಿದರೆ, ಅಂಥವರ ಬಗ್ಗೆ ಗಮನಕ್ಕೆ ತಂದಾಗ ಸೂಕ್ತ ಕ್ರಮ ಜರುಗಿಸಲಾಗುವುದು ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಹೇಳಿದರು.
ಸಭೆಯಲ್ಲಿ ಇನ್‌ಸ್ಪೆಕ್ಟರ್ ರಾಜೇಂದ್ರ ನಾಯ್ಕ, ತಹಸೀಲ್ದಾರ್ ಎಸ್.ಎ.ಪ್ರಸಾದ್, ಇಒ ವಿಜಯ ಕುಮಾರಿ, ಹೆಬ್ರಿ ಪಿಎಸ್‌ಐ ರವಿ ಬಿ.ಕೆ., ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ಅಂಗನವಾಡಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಬಳಸುವ ಆಹಾರ ಉತ್ಪಾದಕ ವಸ್ತುಗಳು ಗುಣಮಟ್ಟದ್ದಾಗಿರಬೇಕು. ಒಂದು ವೇಳೆ ಗುಣಮಟ್ಟದ ಕೊರತೆ ಇದ್ದಾಗ ವಾಪಸ್ ಕಳುಹಿಸಬೇಕು. ಅವಧಿ ಮುಗಿದ ವಸ್ತುಗಳನ್ನು ಬಳಸಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ಲೋಕಾಯುಕ್ತ ಎಸ್‌ಪಿ ಕುಮಾರ್ ಎಚ್ಚರಿಸಿದರು.
ಸಭೆಗೆ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್‌ಗಳು ಗೈರಾಗಿದ್ದರು. ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು, ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂಬುದು ಗೊತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಗೈರಾಗಿರುವುದು ಸರಿಯಲ್ಲ. ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.