ಅನುದಾನಿತ ಶಿಕ್ಷಕರ ಮೇಲೆ ಇಲಾಖೆ ಪ್ರಹಾರ ಸಲ್ಲ

Published on

ವೇತನಾನುದಾನ ತಡೆ ನಿರ್ಧಾರ ಹಿಂಪಡೆಯಲು ಆಗ್ರಹ | ವಿಷಯವಾರು ಲಿತಾಂಶ ಕುಸಿತಕ್ಕೆ ಬೋಧಕರಷ್ಟೇ ಕಾರಣರಲ್ಲ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಹಿಡಿಯುವುದಾಗಿ ಅನುದಾನಿತ ಶಿಕ್ಷಕರ ಮೇಲೆ ಶಿಕ್ಷಣ ಇಲಾಖೆ ಪ್ರಹಾರ ಮಾಡಿದ್ದು, ಈ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ ಆಗ್ರಹಿಸಿದೆ.

ನಗರದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳ ಬೋಧಕರನ್ನು ಗುರುತಿಸಿ ಅಂತಹವರ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯುವುದು ಹಾಗೂ ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ಮೂರು ವರ್ಷಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಲ್ಲಿ ಅಂತಹ ಶಿಕ್ಷಕರ ವೇತನಾನುದಾನ ತಡೆಹಿಡಿಯುವುದಾಗಿ ಇಲಾಖೆ ಪ್ರಹಾರ ಮಾಡಿದೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ ಕಡಿಮೆಯಾಗಲು ಪ್ರೌಢಶಾಲಾ ಶಿಕ್ಷಕರು ಮಾತ್ರ ಕಾರಣವಲ್ಲ. ವಿದ್ಯಾರ್ಥಿಗಳು ಬೆಳೆದು ಬಂದಿರುವ ಪರಿಸರ. ಪ್ರಾಥಮಿಕ ಹಂತದಲ್ಲಿ ಕಲಿತಿರುವಂತಹ ಶಿಕ್ಷಣವೂ ಕಾರಣ. ಪಾಲಕರು ಹಾಗೂ ಕೆಲವು ಶಾಲಾ ಆಡಳಿತ ಮಂಡಳಿಗಳ ಅಸಹಕಾರ, ವಿದ್ಯಾರ್ಥಿಗಳ ಗೈರು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬದೇ ಇರುವುದು ಸಹ ಕಾರಣ ಎಂದು ವಿವರಿಸಿದರು.

ಶಿಕ್ಷಕ ಜಯಶಂಕರ್ ಮಾತನಾಡಿ, ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಮತ್ತು ವೇತನಾನುದಾನ ತಡೆ ಹಿಡಿಯುವುದರಿಂದ ಶಿಕ್ಷಕರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ. ಈ ಆದೇಶವನ್ನು ಹಿಂಪಡೆದು ಶಿಕ್ಷಕರು ಗೊಂದಲವಿಲ್ಲದೆ ಬೋಧನೆ ಮಾಡಲು ಅನುವು ಮಾಡಿಕೊಡಬೇಕಿದೆ ಎಂದು ಹೇಳಿದರು.

ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಮನಗೂಳಿ, ಸಂಘದ ಪದಧಿಕಾರಿಗಳಾದ ಮೂರ್ತಿ, ಹರೀಶ್, ಎಂ.ಕೆ.ಸಿದ್ಧರಾಜು, ಶ್ರೀನಿವಾಸರೆಡ್ಡಿ, ಪ್ರಭಾಕರ್, ನಾಗರಾಜು, ಮಂಜುನಾಥ್, ಅನುದಾನಿತ ಶಾಲಾ ಶಿಕ್ಷಕರು ಹಾಜರಿದ್ದರು.

ತಾಂತ್ರಿಕ ತೊಂದರೆಗಳೂ ಕಾರಣ

ಪ್ರೌಢಶಾಲಾ ಸಹ ಶಿಕ್ಷಕರು ಬೆಳಗ್ಗೆ 9ರಿಂದ 10ರವರೆಗೆ ವಿಶೇಷ ತರಗತಿ, ಸಂಜೆ ದತ್ತು ಮಕ್ಕಳ ಯೋಜನೆ, ಗುಂಪು ಅಧ್ಯಯನ, ರಾತ್ರಿ ಅವಧಿಗಳಲ್ಲೂ ಹಾಗೂ ರಜಾಅವಧಿಯಲ್ಲೂ ಅಭ್ಯಾಸ ಮಾಡಿಸುವುದು ಮತ್ತು ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನ ಪಾಲಿಸಿದರೂ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಾಗುತ್ತಿಲ್ಲ. ಅನುದಾನಿತ ಸಂಸ್ಥೆಗಳ ಮಾನ್ಯತೆ ನವೀಕರಣ ಹಾಗೂ ಇತರ ತಾಂತ್ರಿಕ ತೊಂದರೆಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಇಲಾಖೆ ಈ ರೀತಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಿ ಹೊರಡಿಸುವ ಆದೇಶಗಳು ಶಿಕ್ಷಕರನ್ನು ಮಾನಸಿಕ ಒತ್ತಡಕ್ಕೆ ದೂಡುತ್ತಿವೆ ಎಂದು ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆ ಮುಖ್ಯಶಿಕ್ಷಕ ಅಶ್ವತ್ಥರೆಡ್ಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net