

ಸಿದ್ದಾಪುರ: ಉತ್ತಮ ಹಾಗೂ ಸುರಕ್ಷಿತ ರಸ್ತೆ ಗಳಿದ್ದರೆ ಮಾತ್ರ ಪ್ರಯಾಣ ಸುಗಮವಾಗಿರುತ್ತದೆ.
ಆದರೆ, ತಾಲೂಕಿನ ಗೋಳಿಮಕ್ಕಿ-ಹಾರ್ಸಿಕಟ್ಟಾ ರಸ್ತೆಯಲ್ಲಿರುವ ಅಪಾಯಕಾರಿ ತಿರುವುಗಳಿಂದಾಗಿ ವಾಹನ ಚಾಲಕರಿಗೆ ಸವಾಲಿನ ಹಾಗೂ ಪ್ರಯಾಣಿಕರಿಗೆ ಪ್ರಯಾಸ ನೀಡುವ ರಸ್ತೆ ಆಗಿದೆ.
ಸಿದ್ದಾಪುರ-ಕೋಲಸಿರ್ಸಿ-ಹಾರ್ಸಿಕಟ್ಟಾ ಮಾರ್ಗವಾಗಿ ಹೇರೂರು ಹಾಗೂ ಹೆಗ್ಗರಣಿ ಭಾಗಕ್ಕೆ ತೆರಳಬೇಕಾದರೆ ಹಾರ್ಸಿಕಟ್ಟಾ- ಗೋಳಿಮಕ್ಕಿ ರಸ್ತೆಯಲ್ಲಿ ತೆರಳಬೇಕು.
ಹಾರ್ಸಿಕಟ್ಟಾದಿಂದ ಗೋಳಿಮಕ್ಕಿವರೆಗಿನ ಅಂತರ ಕೇವಲ 8 ಕಿಮೀ. ಆದರೆ, ಇದರ ನಡುವೆ ಬರೋಬ್ಬರಿ 87 ತಿರುವುಗಳಿದೆ. ಇಷ್ಟು ತಿರುವುಗಳು ತಾಲೂಕಿನಲ್ಲಿ ಬೇರೆ ಯಾವ ರಸ್ತೆಯಲ್ಲಿಯೂ ಇಲ್ಲ ಎಂದು ವಾಹನ ಚಾಲಕರು ಹೇಳುತ್ತಾರೆ.
87 ತಿರುವುಗಳಲ್ಲಿ ಸುಮಾರು 25ಕ್ಕೂ ಹೆಚ್ಚು ತಿರುವುಗಳು ಅಪಾಯಕಾರಿಯಾಗಿವೆ.
ಪ್ರತಿವರ್ಷ ಹತ್ತಾರು ಅಪಘಾತಗಳು ಸಂಭವಿಸುತ್ತಿದ್ದು, ದ್ವಿಚಕ್ರವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ.
ಇನ್ನು ದೊಡ್ಡ ವಾಹನ ಚಾಲಕರಿಗೆ ರಸ್ತೆಯ ತಿರುವಿನ ಮರ್ಮವನ್ನು ತಿಳಿಯಲಾಗದೆ ಅಪಘಾತ ಸಂಭವಿಸಿವೆ.
ಲೋಕೋಪಯೋಗಿ ಇಲಾಖೆ ಹಂತ ಹಂತವಾಗಿ ಡಾಂಬರ್ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದೆ.
ಆದರೆ, ರಸ್ತೆ ಅಗಲೀಕರಣ ಹಾಗೂ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದರಿಂದ ಉತ್ತಮ ರಸ್ತೆ ನಿರ್ಮಾಣ ಮಾಡಿದ್ದರೂ ಅಪಾಯ ಮಾತ್ರ ತಪ್ಪಿಲ್ಲ ಹಾಗೂ ಅಪಾಯದ ತಿರುವಿರುವಲ್ಲಿ ನಾಮಫಲಕ ಇದ್ದೂ ಇಲ್ಲದಂತಾಗಿದೆ.
ಮಳೆಗಾಲ ಆರಂಭವಾಗುವುದರೊಳಗೆ ಅವಶ್ಯ ಇದ್ದಲ್ಲಿ ರಸ್ತೆ ಅಗಲೀಕರಣ, ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು.
ಉಂಚಳ್ಳಿ ಜಲಪಾತ, ನಿಲ್ಕುಂದ ಸಮೀಪದ ಭೀಮನವಾರೆ ಗುಡ್ಡ, ನೆಲೆಮಾಂವು ಮಠ ಸೇರಿದಂತೆ ವಿವಿಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ನೀಡುವ ರಾಜ್ಯ ಹೆದ್ದಾರಿ ಇದಾಗಿರುವುದರಿಂದ ಲೋಕೋಪಯೋಗಿ ಇಲಾಖೆ ಈ ಕುರಿತು ಗಮನ ಹರಿಸಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ.
ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆ ಉತ್ತಮವಾಗಿದೆ. ಇಲ್ಲಿಯ ಆಪಾಯದ ತಿರುವುಗಳು ವಾಹನ ಸವಾರರಿಗೆ ಸವಾಲಿನದ್ದಾಗಿದೆ. ಕೆಲವು ತಿರುವು ಅಪಾಯಕ್ಕೆ ಎಡೆ ಮಾಡಿಕೊಡುವಂತಿದ್ದು, ಅಲ್ಲಿ ಅಗಲೀಕರಣಗೊಳಿಸುವುದಲ್ಲದೆ ರಸ್ತೆ ಹಾಳಾಗದಂತೆ ನೀರು ಸರಿಯಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಮಾಡಬೇಕು.- ನಾಗರಾಜ ನಾಯ್ಕ, ವಾಹನ ಚಾಲಕ
ಮಳೆಗಾಲ ಆರಂಭ ಆಗುವುದರೊಳಗೆ ಗೋಳಿಮಕ್ಕಿ-ಹಾರ್ಸಿಕಟ್ಟಾ ರಸ್ತೆಯ ಪಕ್ಕದ ಚರಂಡಿಯಲ್ಲಿನ ಹೂಳು ತೆಗೆಸಲಾಗುವುದು.-ವೈ.ಎಂ. ರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಸಿದ್ದಾಪುರ