

ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಡೆಂಘೆ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದರೂ ಆತಂಕ ಕಡಿಮೆಯಾಗಿಲ್ಲ. ಹಾಗಾಗಿ ಅಕ್ಟೋಬರ್ ಅಂತ್ಯದವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳು ಕಡಿಮೆ ಆಗುತ್ತಿದ್ದಂತೆ ಡೆಂಘೆ ನಿಯಂತ್ರಣಕ್ಕೆ ಬಂದಿದೆ ಎಂದರ್ಥವಲ್ಲ. ಬಿಸಿಲು ಮಳೆಯ ವಾತಾವರಣದಿಂದ ಪ್ರಕರಣಗಳ ಏರಿಳಿತವಾಗುವ ಸಾಧ್ಯತೆ ಇದೆ. ಆದ್ದರಿಂದ ಡೆಂಘೆ ನಿಯಂತ್ರಣಕ್ಕೆ ಇಲಾಖೆ ಕೈಗೊಂಡಿರುವ ಕ್ರಮಗಳನ್ನೂ ಮುಂದುವರೆಸಲಾಗುತ್ತದೆ. ಅದೇ ರೀತಿ ಜನರು ಸಹ ಡೆಂಘೆ ಜ್ವರ ಕಡೆಗಣಿಸದೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,989 ಡೆಂಘೆ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 259 ಹೊಸ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,085ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳ ಸಂಖ್ಯೆ 19,923ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 1,827 ಮಂದಿ ಮನೆ ಆರೈಕೆಗೆ ಒಳಗಾದರೆ, ತೀವ್ರ ನಿಗಾ ಘಟಕದಲ್ಲಿರುವ ಆರು ಮಂದಿ ಸೇರಿ 258 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.