ಹೊಗೆ ಹಾಕಿ, ಸೊಳ್ಳೆ ಓಡಿಸಿ

Dhoop
Published on

ಬೆಂಗಳೂರು: ಸೊಳ್ಳೆಗಳಿಂದ ಹರಡಬಹುದಾಗ ರೋಗಗಳು ವ್ಯಾಪಕವಾಗಿದ್ದು, ಇವುಗಳಿಂದ ನೈಸರ್ಗಿಕವಾಗಿ ರಕ್ಷಣೆ ಪಡೆಯಲು ಔಷಧಯುಕ್ತ ಸೊಪ್ಪುಗಳ ಹೊಗೆ ಹಾಕಿ ಸೊಳ್ಳೆಗಳನ್ನು ಓಡಿಸಬಹುದು ಎಂದು ಕೆಲ ಆಯುರ್ವೇದ ವೈದ್ಯರು ಸಲಹೆ ನೀಡಿದ್ದಾರೆ.

ಡೆಂಘೆ, ಚಿಕೂನ್ ಗುನ್ಯಾ, ಮಲೇರಿಯಾ, ಜಿಕಾದಂತಹ ರೋಗಗಳು ಜನರನ್ನು ಬಾಧಿಸುತ್ತಿವೆ. ಒಂದು ವಾರದಲ್ಲಿ 2 ಸಾವಿರಕ್ಕೂ ಅಧಿಕ ಡೆಂಘೆ ಪ್ರಕರಣಗಳು ದೃಢಪಟ್ಟಿವೆ. ಸೊಳ್ಳೆಗಳ ನಾಶಕ್ಕೆ ಬಿಬಿಎಂಪಿ ಸೇರಿ ಸ್ಥಳೀಯ ಆಡಳಿತ ಮಂಡಳಿಗಳು ಕ್ರಮ ಕೈಗೊಂಡಿವೆಯಾದರೂ ನಿಯಂತ್ರಣ ಸಾಧ್ಯವಾಗಿಲ್ಲ. ಹಾಗಾಗಿ ಮನೆಯ ಒಳ ಹೊರಗೆ ಬೇವಿನ ಎಲೆ, ಹೊಂಗೆ ಎಲೆ, ಬೆಳ್ಳುಳ್ಳಿ ಸಿಪ್ಪೆ, ಲಕ್ಕೆ ಸೊಪ್ಪು, ತುಳಸಿ ಬೀಜ, ಸಾಸಿವೆ ಬಳಸಿ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ಹೀಗೆ ಮಾಡುವುದರಿಂದ ನೆಗಡಿ, ಸೀನು, ಅಲರ್ಜಿ, ಉಸಿರಾಟದ ತೊಂದರೆಗಳಿಂದಲೂ ಮುಕ್ತರಾಗಬಹುದಾಗಿದೆ. ಇದರಿಂದ ಅಡ್ಡಪರಿಣಾಮ ಆಗುವುದಿಲ್ಲ.

ನೈಸರ್ಗಿಕ ವಸ್ತುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನವನ್ನು ಪುಡಿ ಮಾಡಿಕೊಂಡು ಮಣ್ಣಿನ ಅಥವಾ ಲೋಹದ ಪಾತ್ರೆಯಲ್ಲಿ ಇದ್ದಿಲು ಹಾಗೂ ಸ್ವಲ್ಪ ಪ್ರಮಾಣದ ಕರ್ಪೂರ ಸೇರಿಸಿ ಬೆಳಗ್ಗೆ, ಸಂಜೆ ಹೊಗೆ ಹಾಕಬೇಕು. ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೂ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ಉಸಿರಾಟ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರು ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಸೂಕ್ತ. ಹೊಗೆ ಹಾಕುವ ಮೊದಲು ಕೊಠಡಿಯ ಕಿಟಕಿ ಬಾಗಿಲು ಮುಚ್ಚಿ ಒಂದು ಗಂಟೆಯ ನಂತರ ಒಳಗೆ ಪ್ರವೇಶಿಸಬೇಕು ಎಂದಿದ್ದಾರೆ.

ಸೊಳ್ಳೆಗಳಿಂದ ಹರಡುವ ರೋಗಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯವಿದೆ. ಇದಲ್ಲದೆ ತುಳಸಿ, ಅಮೃತಬಳ್ಳಿ, ಕಿರಾತ ತಿಕ್ತ (ಭೋನಿಂಬ) ಸಸ್ಯಗಳನ್ನು ಬಳಸಿ ವೈದ್ಯರ ಸಲಹೆಯಂತೆ ಕಷಾಯ ಸಿದ್ದಪಡಿಸಿ ಸೇವಿಸುವುದರಿಂದ ಡೆಂಘೆಯಿಂದ ಮುಕ್ತರಾಗಬಹುದು.

ಡಾ. ಕಿರಣ್ ಕುಮಾರ್, ಆಯುರ್ವೇದ ತಜ್ಞರು, ಶ್ರೀ ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net