ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೆ ಪ್ರಕರಣ: ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಾರ್ಯಕ್ರಮ

Dengue
Published on

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ಜ್ವರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನವನ್ನಾಗಿ ಘೋಷಿಸಿದ್ದು, ಮನೆ, ಶಾಲಾ, ಕಾಲೇಜು, ಕಚೇರಿ, ಅಂಗನವಾಡಿ ಕೇಂದ್ರಗಳು, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟೈ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದ ಲಾರ್ವಾ ಪತ್ತೆ ಮಾಡಿ ನಾಶಪಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಆ ಮೂಲಕ ಈಡಿಸ್ ಸೊಳ್ಳೆಯಿಂದ ರಕ್ಷಣೆ ಪಡೆಯುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಡೆಂಘೆ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ನಿಯಂತ್ರಣಾ ಕ್ರಮಗಳು: ಸಾರ್ವಜನಿಕರು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ, ಸೊಳ್ಳೆ ಕಾಯಿಲ್‌ಗಳನ್ನು ಬಳಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳಾದ ಹಳ್ಳ ಕೊಳ್ಳ, ಹೂಕುಂಡ, ತ್ಯಾಜ್ಯಗಳಲ್ಲಿ ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳಬೇಕು. ತೊಟ್ಟಿ, ಡ್ರಮ್, ಬಿಂದಿಗೆ ಸೇರಿ ನೀರು ಸಂಗ್ರಹಗಳನ್ನು ಪೂರ್ಣವಾಗಿ ಮುಚ್ಚಬೇಕು. ಬಳಸಿ ಎಸೆದ ಟೀ ಕಪ್, ಪ್ಲಾಸ್ಟಿಕ್ ಬಾಟೆಲ್, ಡಬ್ಬಗಳು, ಟೈರ್‌ಗಳು ಸೇರಿ ನಿರುಪಯುಕ್ತ ವಸ್ತುಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಈಡಿಸ್ ಸೊಳ್ಳೆಯ ಲಾವಾಗಳು ಬೆಳೆಯಲು ಕಾರಣವಾಗುತ್ತದೆ. ಹಾಗಾಗಿ ಇಂತಹ ತಾಣಗಳನ್ನು ಮುಕ್ತಗೊಳಿಸಬೇಕು.

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಲಹೆಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಡೆಂಘೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net