

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ರಾಜ್ಯಾದ್ಯಂತ ಡೆಂಘೆ ಹಾಗೂ ಚಿಕೂನ್ ಗುನ್ಯಾ ದಾಂಗುಡಿ ಹೆಚ್ಚಾಗುತ್ತಿದೆ. ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲಿ ಅರ್ಧ ಶತಕದಷ್ಟು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಸಾಮಾನ್ಯ ಜ್ವರ, ಮೈ-ಕೈ ನೋವು, ಡೆಂಘೆ ಮತ್ತು ಚಿಕೂನ್ ಗುನ್ಯಾ ರೋಗಗಳಿಂದ ಜನರು ಬಳಲಿ ಬೆಂಡಾಗುತ್ತಿದ್ದಾರೆ. ಬದಲಾದ ಹವಾಮಾನದ ಜತೆಗೆ ರೋಗಗಳು ಜನರನ್ನು ಕಾಡುತ್ತಿವೆ.
ಸಾಂಕ್ರಾಮಿಕ ರೋಗಗಳ ಹಾವಳಿ ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಮನೆಯಲ್ಲಿ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಇಡೀ ಮನೆಯವರನ್ನೆಲ್ಲ ಕಾಡಿಬಿಡುವುದು ಸಾಮಾನ್ಯವಾಗಿದೆ. ಅದೇ ರೀತಿ ಈಗ ಜಿಲ್ಲೆಯಲ್ಲಿ ಜ್ವರದ ಹಾವಳಿ ಜೋರಾಗಿದೆ. ನಿತ್ಯವೂ ಆಸ್ಪತ್ರೆಗಳಿಗೆ ಎಡ ತಾಕುವಂತಹ ಪರಿಸ್ಥಿತಿ ಇದೆ. ಮೋಡ ಕವಿದ ವಾತಾವರಣವೂ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ಜಿಲ್ಲೆಯಲ್ಲಿ ಈ ವರ್ಷ ಈವರೆಗೆ 59 ಡೆಂಘೆ, 27 ಚಿಕೂನ್ಗುನ್ಯಾ ಹಾಗೂ ಒಂದು ಮಲೇರಿಯಾ ಪ್ರಕರಣ ದಾಖಲಾಗಿವೆ. ರಾಣೆಬೆನ್ನೂರ ತಾಲೂಕಿನಲ್ಲಿ ಅತಿ ಹೆಚ್ಚು 16 ಡೆಂಘೆ ಪ್ರಕರಣಗಳು ಹಾಗೂ 5 ಚಿಕೂನ್ಗೂನ್ಯಾ ಪ್ರಕರಣ ದಾಖಲಾಗಿದ್ದು ಮೊದಲ ಸ್ಥಾನದಲ್ಲಿದೆ.
ಜಾಗೃತಿ ಮರೆತರೆ ಕಷ್ಟ: ಮನೆಯ ಒಳಗೆ ಹಾಗೂ ಸುತ್ತಮುತ್ತಲು ನೀರು ನಿಲ್ಲಬಹುದಾದ ವಾಷ್ ಬೇಸಿನ್, ತೊಟ್ಟಿ, ಡ್ರಮ್ ಹೂ ಕುಂಡಗಳು, ಹಳ್ಳ , ನೀರು ನಿಲ್ಲುವ ಸ್ಥಳಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಕಾಲಕಾಲಕ್ಕೆ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ತೆರೆದ ಚರಂಡಿಗಳಲ್ಲೇ ನೀರು ನಿಲ್ಲುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕಿದೆ.
ಮನೆ ಮನೆಗೂ ಭೇಟಿ: ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಡೆಂಘೆ, ಚಿಕೂನ್ಗುನ್ಯಾ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಕಾರ್ಯಾಲಯದಿಂದ ಮನೆ ಮನೆಗೂ ತೆರಳಿ ಲಾರ್ವಾ ಸಮೀಕ್ಷೆ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾವುದಾದರೂ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡರೆ ಸುತ್ತಮುತ್ತಲಿನ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅಲ್ಲದೆ, ದೊಡ್ಡ ದೊಡ್ಡ ಹಳ್ಳಗಳು, ಗುಂಡಿಗಳಲ್ಲಿರುವ ಸೊಳ್ಳೆ ತಡೆಗೆ ಮೀನುಗಳನ್ನು ಬಿಡುವ ಕೆಲಸಗಳು ನಡೆಯುತ್ತಿವೆ. ಇನ್ನೊಂದೆಡೆ ಡಯೋಗ್ನಿಸ್ಟಿಕ್ ಸೆಂಟರ್ಗಳ ತಾಂತ್ರಿಕ ವರ್ಗದವರ ಜತೆ ಸಭೆ ನಡೆಸಿ ಜ್ವರ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ವಿಶೇಷ ಜಾಗೃತಿ ಅ. 3ರಿಂದ : ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮನೆ, ಮನೆಗೆ ಭೇಟಿ ನೀಡಿ ಜನರು ನೀರನ್ನು ಸಂಗ್ರಹಿಸುವ ತೊಟ್ಟಿಗಳು, ಟ್ಯಾಂಕ್ಗಳನ್ನು ಪರಿಶೀಲಿಸಿ ಸ್ವಚ್ಛತೆ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಹಾಗೂ ಲಾರ್ವಾ ಸಮೀಕ್ಷೆ ಮಾಡುವ ಸಲುವಾಗಿ ಅ. 3ರಿಂದ 7ರವರೆಗೆ ವಿಶೇಷ ಲಾರ್ವಾ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯಲ್ಲಿ ಪ್ರಕರಣ ಸಂಖ್ಯೆ ಕೊಂಚ ಕಡಿಮೆಯಿದೆ. ಜನತೆ ಡೆಂಘೆ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ವೈದ್ಯ ಪದ್ಧತಿ ಪಾಲಿಸದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಡೆಂಘೆ ಜ್ವರದ ಲಕ್ಷಣಗಳಿದ್ದಲ್ಲಿ ನೋವು ನಿವಾರಕ ಔಷಧ ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ. ಡೆಂಘೆ ಜ್ವರ, ಚಿಕೂನ್ ಗುನ್ಯಾ ಬಗ್ಗೆ ಭಯ ಬೇಡ, ಆದರೆ ಎಚ್ಚರವಿರಲಿ. ಎಲ್ಲರೂ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕು. | ಡಾ. ಸರೀತಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ