

ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ. ಪಾಟೀಲ ಸ್ವತಂತ್ರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಜು. 25ರಂದು ಬೆಳಗ್ಗೆ 11 ಗಂಟೆಗೆ ಡ್ರೋನ್ ಮೂಲಕ ನ್ಯಾನೋ ಗೊಬ್ಬರಗಳ ಪ್ರಾತ್ಯಕ್ಷಿಕೆ ಮತ್ತು ಬಳಕೆ ಮತ್ತು ಬೇಸಾಯ ಕ್ರಮಗಳ ಕುರಿತು ತರಬೇತಿ ಶಿಬಿರ ನಡೆಯಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಉಪಾಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್‌ಲಿ., ರಾಜ್ಯ ಸಹಕಾರ ಮಹಾಮಂಡಳ ನಿ., ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದರು.
ನವದೆಹಲಿ ಇಫ್ರೋದ ಮಾರ್ಕೆಟಿಂಗ್ ಡೈರೆಕ್ಟರ ಯೋಗೇಂದ್ರಕುಮಾರ ಉದ್ಘಾಟಿಸುವರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಉಪಾಧ್ಯಕ್ಷ ಶಿವಕುಮಾರಗೌಡ ಪಾಟೀಲ ಅಧ್ಯತಕ್ಷತೆ ವಹಿಸುವರು. ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ವೆಂಕಟರಾಮರೆಡ್ಡಿ ಪಾಟೀಲ ಡ್ರೋನ್ ಪ್ರಾತ್ಯಕ್ಷಿಕೆಗೆ ಚಾಲನೆ ನೀಡುವರು.
ಕೃಷಿಯಲ್ಲಿ ನ್ಯಾನೋ ಯುರಿಯಾ ಮತ್ತು ಡಿಎಪಿ ಬಳಕೆ ಕುರಿತು ಡಾ.ಸಿ. ನಾರಾಯಣಸ್ವಾಮಿ ಉಪನ್ಯಾಸ ನೀಡುವರು. ಸಿ. ಪಿಳ್ಳೆಗೌಡ ಸಹಕಾರ ಸಂಘಗಳಲ್ಲಿ ರೈತರು ಉಪಯೋಗಿಸುವ ರಸಗೊಬ್ಬರ ಕುರಿತು ಮಾಹಿತಿ ನೀಡುವರು ಎಂದರು.
ಮಿಥುನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ ಮತ್ತು ಸುಜಾತಾ ದೊಡ್ಡಮನಿ ಕೃಷಿ ಪರಿಕರಗಳನ್ನು ವಿತರಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಎಚ್. ತಾರಾಮಣಿ, ಸಿ.ಕೆ. ಲಮಾಣಿ ಆಗಮಿಸುವರು. 2 ಡ್ರೋನ್ ಪ್ರಾತ್ಯಕ್ಷಿಕೆಗೆ ಆಗಮಿಸುವವು. ನ್ಯಾನೋ ಗೊಬ್ಬರ ಸಿಂಪಡಿಸುವ ಪರಿಕರ ರೈತರಿಗೆ ಉಚಿತವಾಗಿ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು ದಾವಣಗೇರಿ, ಹೇಮಣ್ಣ ಪೂಜಾರ, ಎಂ.ಯು. ಮಕಾಂದಾರ, ಶರಣಪ್ಪ ಉಳ್ಳಾಗಡ್ಡಿ, ವಿನೋದ ವಡ್ಡರ ಇದ್ದರು.