

ಉಳ್ಳಾಲ: ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪ್ರತಿಗಾಮಿ ಶಕ್ತಿಗಳು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುವ ಮೂಲಕ ಭೋಗದ ಸರಕನ್ನಾಗಿಸಿದೆ. ಇಂತಹ ಸಂದರ್ಭ ಮಹಿಳಾಪರ ಚಿಂತನೆ ಬೆಳೆಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ ಅಭಿಪ್ರಾಯಪಟ್ಟರು.
ಮುನ್ನೂರು ಯುವಕ ಮಂಡಲದಲ್ಲಿ ಭಾನುವಾರ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಮುಖಂಡೆ ಪದ್ಮಾವತಿ ಶೆಟ್ಟಿ ಮಾತನಾಡಿ, ರಾಜಕೀಯ, ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗುತ್ತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡುತ್ತಿಲ್ಲ. ಶೈಕ್ಷಣಿಕವಾಗಿ ಮಹಿಳೆಯರ ಪ್ರಮಾಣ ಜಾಸ್ತಿಯಿದ್ದರೂ ಸೂಕ್ತ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದರು.
ಹಿರಿಯ ಮುಖಂಡೆ ವಿಲಾಸಿನಿ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಹಿರಿಯ ಮುಖಂಡರಾದ ಪದ್ಮಾವತಿ ಕುತ್ತಾರ್, ಮಹಿಳಾಪರ ಚಿಂತಕಿ ಅರ್ಚನಾ ರಾಮಚಂದ್ರ, ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಪ್ರಮುಖರಾದ ಪ್ರೀತಾ ರೋಹಿದಾಸ್, ಪ್ರಮೋದಿನಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷೆಯಾಗಿ ಮಾಲತಿ ಸುಧೀರ್ ತೊಕ್ಕೊಟ್ಟು, ಕಾರ್ಯದರ್ಶಿಯಾಗಿ ಪ್ರಮೋದಿನಿ ಕಲ್ಲಾಪು, ಕೋಶಾಧಿಕಾರಿಯಾಗಿ ಅರ್ಚನಾ ರಾಮಚಂದ್ರ, ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ರಾಜೇಶ್ವರಿ, ಶಾಲಿನಿ ಪೂಜಾರಿ, ರತ್ನಮಾಲಾ, ಉಮಾವತಿ, ವಿನೋದಾ ಅಸೈಗೋಳಿ, ಜತೆಕಾರ್ಯದರ್ಶಿಗಳಾಗಿ ಪ್ರೀತಾ ರೋಹಿದಾಸ್, ವಿಲಾಸಿನಿ, ಕಮರುನ್ನೀಸಾ, ಗುಣವತಿ, ಗುಲಾಬಿ ಸಹಿತ 16 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.