ಗೃಹ ಆರೋಗ್ಯ ಯೋಜನೆಯಡಿ ಮರೆವಿನ ಕಾಯಿಲೆ ಪತ್ತೆಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

Sudhee_21_World_Alzheimer's_Day_@_NIMHANS (1)
Published on

ಬೆಂಗಳೂರು: ಗಂಭೀರ ಸ್ವರೂಪದ ಮರೆವಿನ ಕಾಯಿಲೆ (ಡಿಮೆನ್ಶಿಯಾ)ಯು ರೋಗಿಯ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಾಗಾಗಿ ಗೃಹ ಆರೋಗ್ಯ ಯೋಜನೆಯಡಿ ಈ ಕಾಯಿಲೆ ಪತ್ತೆ ಮಾಡಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಡಿಮೆನ್ಶಿಯಾ ಇಂಡಿಯಾ ಅಲೈನ್ಸ್ (ಡಿಐಎ)ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ ‘ವಿಶ್ವ ಅಲ್ಝೈಮರ್ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮರೆವಿನ ಕಾಯಿಲೆ ಎದುರಿಸುತ್ತಿರುವವರ ಆರೈಕೆ ಮಾಡುತ್ತಿರುವವರಿಗೆ ಆರ್ಥಿಕ ಬೆಂಬಲ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಯಾವ ರೀತಿ ಬೆಂಬಲ ನೀಡಲು ಸಾಧ್ಯ ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದ ಸಚಿವರು, ಇದೇ ವೇಳೆ ಡಿಮೆನ್ಶಿಯಾ ಕಾಯಿಲೆ ಸಾರ್ವಜನಿಕ ಆರೋಗ್ಯದ ಆದ್ಯತೆ ಎಂದು ಘೋಷಿಸಿದರು.

ಕ್ರಿಯಾ ಯೋಜನೆ:

ರಾಜ್ಯದ 8 ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ಮನೆಗೂ ತೆರಳಿ, ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಸೇರಿ ವಿವಿಧ ರೋಗಗಳನ್ನು ಪತ್ತೆ ಮಾಡಲಾಗುತ್ತದೆ. ಇದರ ಜೊತೆಗೆ ಮರೆವಿನ ಕಾಯಿಲೆಯನ್ನೂ ಗುರುತಿಸಲಾಗುವುದು ಎಂದು ಹೇಳಿದರು.

ಜನಸಂಖ್ಯೆ ಹೆಚ್ಚಳದೊಂದಿಗೆ ರೋಗಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ರೋಗ ಪತ್ತೆಗೆ ಆದ್ಯತೆ ನೀಡಲಾಗಿದೆ. ಕ್ರಿಯಾ ಯೋಜನೆಯಲ್ಲಿರುವ ಕೆಲ ಅಂಶಗಳನ್ನು ಈಗಾಗಲೇ ಕಾರ್ಯಗತಗೊಂಡಿದೆ ಎಂದು ತಿಳಿಸಿದರು.

ನೋಂದಣಿ ಅಗತ್ಯ:

ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಸದ್ಯ ಶೇ. 5 ಮಾತ್ರವೇ ಮೆರೆವಿನ ಕಾಯಿಲೆ ಎದುರಿಸುತ್ತಿರುವವರನ್ನು ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ಸಮಸ್ಯೆ ಇರುವವರನ್ನು ಗರುತಿಸುವುದು ಕಷ್ಟ. ಆದ್ದರಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪಾಸಣೆ ನಡೆಸಬೇಕು. ಕರ್ನಾಟಕ ಡಿಮೆನ್ಶಿಯಾ ನೋಂದಣಿ ಪ್ರಾರಂಭಿಸಬೇಕು. ಆರೈಕೆದಾರರಿಗೆ ತರಬೇತಿ ಯೊಂದಿಗೆ ಆರ್ಥಿಕ ನೆರವು ನೀಡಬೇಕು. ಕಾಯಿಲೆ ಇರುವವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.

ಡಿಮೆನ್ಶಿಯಾ ಇಂಡಿಯಾ ಅಲೈನ್ಸ್ ಅಧ್ಯಕ್ಷೆ ಡಾ. ರಾಧಾ ಮೂರ್ತಿ ಮಾತನಾಡಿ, ‘‘ಮರೆವಿನ ಕಾಯಿಲೆಯು ಒಬ್ಬ ವ್ಯಕ್ತಿಗೆ ಸಿಮೀತವಾಗದೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಗೆ ಒಳಗಾದವರನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿದೆ, ಬಹಳಷ್ಟು ಕುಟುಂಬಗಳಲ್ಲಿ ಸಂಬಂಧಗಳು ಹಾಳಾಗಿವೆ. ಹಾಗಾಗಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ನಿರ್ವಹಣೆಗೆ ರಾಷ್ಟ್ರಮಟ್ಟದಲ್ಲಿ ನೀತಿ ರೂಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಸಚಿವರಿಗೆ ಕ್ರಿಯಾ ಯೋಜನೆಯನ್ನು ಹಸ್ತಾಂತರಿಸಿದರು. ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ಆರೋಗ್ಯ ಇಲಾಖೆ ಉಪನಿರ್ದೇಶಕಿ (ಮಾನಸಿಕ ಆರೋಗ್ಯ) ಡಾ. ರಜನಿ ಪಾರ್ಥಸಾರಥಿ, ನಿಮ್ಹಾನ್ಸ್ ವೈದ್ಯರು ಹಾಗೂ ಡಿಮೆನ್ಶಿಯಾ ಇಂಡಿಯಾ ಅಲೈನ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net