ಮೆಟ್ರೋ ಟಿಕೆಟ್ ದರ ಏರಿಕೆ ಹಿಂಪಡೆಯಲು ಆಗ್ರಹ ; ಬೆಂಗಳೂರು ಉಳಿಸಿ ಸಮಿತಿ ಸಮಾವೇಶ

metro
Published on

ಬೆಂಗಳೂರು: ಬೆಂಗಳೂರು ಉಳಿಸಿ ಸಮಿತಿ ಆಶ್ರಯದಲ್ಲಿ ಮೆಟ್ರೋ ಪ್ರಯಾಣಿಕರ ಸಂಘ ಆಯೋಜಿಸಿದ್ದ ಸಮಾವೇಶದಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಹಿಂಪಡೆಯುವಂತೆ ಸಂಘಟಕರು ಆಗ್ರಹಿಸಿದ್ದಾರೆ.

ನಗರದ ಅರಮನೆ ರಸ್ತೆಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಬೆಂಗಳೂರಿನ ವಿವಿಧ ಭಾಗಗಳ ನೂರಾರು ನಾಗರೀಕರು, ವಿದ್ಯಾರ್ಥಿಗಳು, ವಿಷಯ ತಜ್ಞರು ಪಾಲ್ಗೊಂಡು ಮೆಟ್ರೋ ರೈಲು ನಿಗಮ ಕೈಗೊಂಡ ನಿರ್ಧಾರದ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಸಿದರು. ಮುಖ್ಯಮಂತ್ರಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಲು ಸಮಾವೇಶದಲ್ಲಿ ನಿರ್ಧರಿಸಲಾಯಿತು.

ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ವ್ಯವಸ್ಥೆಗಳ ವಿಭಾಗದ ಪ್ರಾಧ್ಯಾಪಕ ಡಾ. ಆಶಿಶ್ ವರ್ಮಾ ಮಾತನಾಡಿ, ಸಾರ್ವಜನಿಕ ಸಾರಿಗೆ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ನೀಡಬೇಕಾದ್ದು ಸರ್ಕಾರದ ಜವಾಬ್ದಾರಿ. ನಗರದ ಸಂಚಾರಸಿಕ್ಕು ಕಡಿಮೆ ಮಾಡಲು, ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೇರಣೆ ನೀಡಬೇಕಾದ ಸರ್ಕಾರ ಅಥವಾ ಸಾರ್ವಜನಿಕರ ಸಾರಿಗೆ ಸಂಸ್ಥೆಗಳು ಲಾಭ-ನಷ್ಟದ ಲೆಕ್ಕಾಚಾರವನ್ನು ಮುಂದಿಟ್ಟು ಟಿಕೆಟ್ ದರವನ್ನು ಅವೈಜ್ಞಾನಿಕವಾಗಿ ಏರಿಸುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ನಾಗರೀಕರು ಸಾರ್ವಜನಿಕ ಸಾರಿಗೆಯಿಂದ ದೂರ ಸರಿಯುವ ಅಪಾಯ ಎದುರಾಗಿದೆ ಎಂದರು.

ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯಾಧ್ಯಕ್ಷೆ ಡಾ. ಸುಧಾ ಕಾಮತ್ ಮಾತನಾಡಿ, ಬೆಂಗಳೂರಿನಲ್ಲಿ ದಿನಗಳೆದಂತೆ ಸಂಚಾರಸಿಕ್ಕಿನಿಂದ ಪರಿಸರ ಮಾಲಿನ್ಯ ಹೆಚ್ಚಾಗಿ ಉಸಿರಾಟದ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಡಿಮೆ ಬೆಲೆಯಲ್ಲಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸುವ ಮೂಲಕ, ಸಂಚಾರಸಿಕ್ಕು, ಪಾರ್ಕಿಂಗ್ ಸಮಸ್ಯೆ, ಜನರ ಆರೋಗ್ಯವನ್ನು ಕಾಪಾಡಬೇಕಾದ ಮೆಟ್ರೋ ಕಾರ್ಪೊರೇಟ್ ಕಂಪನಿಯಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ಸಮಾವೇಶದಲ್ಲಿ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹ ಪ್ರಾಧ್ಯಾಪಕಿ ಡಾ. ಮೇಘನಾ ವರ್ಮಾ, ಸೇವ್ ಬೆಂಗಳೂರು ಸಮಿತಿಯ ಡಾ. ಜಿ. ಶಶಿಕುಮಾರ್, ಎನ್.ರವಿ, ರಾಜೇಶ್ ಭಟ್, ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಪ್ರೊ. ಮುರುಗೆಪ್ಪ ಮತ್ತಿತರರು ಪಾಲ್ಗೊಂಡಿದ್ದರು.

"ಸಾರ್ವಜನಿಕ ಸಾರಿಗೆ, ವಿದ್ಯುತ್, ನೀರಿನಂತರ ಅಗತ್ಯ ಸೌಲಭ್ಯಗಳನ್ನು ಎಲ್ಲ ವರ್ಗದ ಜನರ ಕೈಗೆಟುಕುವ ದರದಲ್ಲಿ ನೀಡಬೇಕಾದ ಸರ್ಕಾರಗಳು ಖಾಸಗೀಕರಣ, ಕಾರ್ಪೋರೇಟೀಕರಣ ಮಾಡುತ್ತಿರುವುದು ಜನವಿರೋಧಿ ನಿಲುವು. ನಾಗರಿಕರು ಈ ಬಗ್ಗೆ ಕೂಡಲೇ ಧ್ವನಿ ಎತ್ತಬೇಕು." - ವಿ.ಎನ್. ರಾಜಶೇಖರ್, ಸೇವ್ ಬೆಂಗಳೂರು ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net