

ಪ್ರಯಾಗ್‌ರಾಜ್ : ಇಡೀ ದೇಶದ ಗಮನ ಸೆಳೆದಿರುವ ಮಹಾಕುಂಭ ಮೇಳವು ಜನರಲ್ಲಿ ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿರುವ ಜಂಗಮವಾಡಿ ಮಠದಲ್ಲಿ ಕುಂಭಮೇಳದ ಅಂಗವಾಗಿ ಹಮ್ಮಿಕೊಂಡಿದ್ದ 41 ದಿನಗಳ ಕಲ್ಪವಾಸ ಅನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಶದ ವಿವಿಧ ಪ್ರಾಂತ್ಯ, ವಿವಿಧ ಭಾಷೆ, ವಿವಿಧ ಜಾತಿ-ಜನಾಂಗದ ಜನ ಪ್ರಯಾಗ್‌ರಾಜ್‌ಗೆ ಬಂದು ಯಾವುದೇ ಭೇದ-ಭಾವ ವಿಲ್ಲದೆ ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ. ಸಂಗಮ ಎಂದರೆ ಸರ್ವರೂ ಒಂದಾಗುವುದು ಎಂದರ್ಥ ಎಂಬುದನ್ನು ಸನಾತನಿಗಳು ಜಗತ್ತಿಗೆ ಸಾರಿದ್ದಾರೆ. ಇಂತಹ ಬೃಹತ್ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನಿಗೆ ಸಹನೆ, ಸಹಬಾಳ್ವೆ, ಸಾಮರಸ್ಯ, ಸಮನ್ವಯ ಗುಣಗಳು ಬರುತ್ತವೆ. ಈ ಗುಣಗಳನ್ನು ಕುಂಭಮೇಳದ ನಂತರವೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆತನ ಬದುಕು ಸುಂದರವಾಗುವುದರ ಜೊತೆಗೆ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಸಾರ್ಥಕವಾಗುತ್ತದೆ. ಪುಷ್ಯ ಪೌರ್ಣಿಮೆಯಿಂದ ಮಾಘ ಪೌರ್ಣಿಮೆಯ ಅವಧಿಯಲ್ಲಿ ಗಂಗಾ ತೀರದಲ್ಲಿ ವಾಸ ಮಾಡುವುದನ್ನು ಕಲ್ಪವಾಸ ಎನ್ನುತ್ತಾರೆ. ಕಲ್ಪವಾಸದಿಂದ ಪುಣ್ಯ ಲಭಿಸುತ್ತದೆ ಎಂಬುದು ಶಾಸ. ಅಂತೇಯೇ ದೇಶದ 50ಕೋಟಿಗೂ ಅಧಿಕ ಮಂದಿ ಸಂಗಮದಲ್ಲಿ ಮಿಂದು ಪುಣ್ಯ ಸಂಪಾದಿಸಿದ್ದಾರೆ ಎಂದು ಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿ ಕಿರಿಯ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ದಹಿವಡಕರ್ ಮಠದ ಶ್ರೀಮಣಿಕಂಠ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ದೇಶದ ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.