

ಸೋಮವಾರಪೇಟೆ: ಅಕ್ರಮವಾಗಿ ಗೋ ಸಾಗಣೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಕ್ರಮ ಗೋ ಸಾಗಣೆ, ಗೋ ಕಳ್ಳತನ, ಗೋ ಹತ್ಯೆ, ಗೋಮಾಂಸ ಮಾರಾಟ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ಈಚೆಗೆ ಕಾಗಡೀಕಟ್ಟೆ ಸಮೀಪ ಗೋ ಸಾಗಾಟ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಕಳ್ಳರ ಬೆಂಗಾವಲಿಗಿದ್ದ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪ್ರಕರಣದ ನಿಜವಾದ ಆರೋಪಿಗಳನ್ನು ಕೂಡಲೆ ಬಂಧಿಸದಿದ್ದರೆ, ಸೋಮವಾರಪೇಟೆ ಬಂದ್‌ಗೆ ಕರೆ ನೀಡುವುದಾಗಿ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಎಚ್ಚರಿಸಿದರು.
ಹಿಂದುಪರ ಹೋರಾಟಗಾರರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ರೌಡಿಶೀಟ್ ತೆರೆಯುವ ಹುನ್ನಾರಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.
ರಾತ್ರಿ ಪೊಲೀಸ್ ಬೀಟ್‌ಯಿದ್ದರೂ ವಾಹನಗಳಲ್ಲಿ ಅಕ್ರಮವಾಗಿ ಗೋ ಸಾಗಣೆ ನಡೆಯುತ್ತಿದೆ. ಟಿಂಬರ್ ಲಾರಿಗಳು ತಡೆಯುವುದೇ ಕೆಲವು ಪೊಲೀಸರ ಕೆಲಸವಾಗಿದೆ. ತಪಾಸಣಾ ಗೇಟ್‌ಗಳಲ್ಲಿ ಗೋ ಸಾಗಾಟ ನಡೆಯುತ್ತಿದೆ. ಇವೆಲ್ಲಾ ಒಪ್ಪಿಗೆ ಮೇಲೆ ನಡೆಯುವ ಡೀಲ್ ಎಂಬುದು ಓಪೆನ್ ಸಿಕ್ರೇಟ್ ಆಗಿದೆ. ಅಸ್ಸಾಂ ಸೋಗಿನಲ್ಲಿರುವ ಬಾಂಗ್ಲಾ ವಲಸಿಗರು ಕಾರ್ಮಿಕರ ನೆಪದಲ್ಲಿ ಕಾಫಿ ತೋಟಗಳಲ್ಲಿ ವಾಸವಿದ್ದಾರೆ. ಅವರ ಕುಟುಂಬಕ್ಕೆ ಪ್ರತಿವಾರ ಗೋ ಮಾಂಸ ಸರಬರಾಜು ಆಗುತ್ತಿದೆ. ಅದರಲ್ಲೂ ಸೋಮವಾರಪೇಟೆ ಪಟ್ಟಣದೊಳಗೆ ಮಾರಾಟವಾಗುತ್ತದೆ. ಇದೆಲ್ಲಾ ಪೊಲೀಸರಿಗೆ ತಿಳಿಯುತ್ತಿಲ್ಲ. ಇಲಾಖೆಯಲ್ಲಿರುವ ಇಂಟಲಿಜೆನ್ಸ್‌ನವರು ಕೆಲಸ ಮಾಡುತ್ತಿಲ್ಲವೆ? ಎಂದು ಪ್ರಶ್ನಿಸಿದರು.
ಗೋಮಾಂಸ ಮಾರುವವರು, ಗೋಕಳ್ಳತನ ಮಾಡುವವರನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗದಿದ್ದಲ್ಲಿ ಲಿಖಿತವಾಗಿ ಅನುಮತಿ ಕೊಡಿ, ಹಿಂದುಪರ ಸಂಘಟನೆಗಳ ಸದಸ್ಯರು ಎರಡೇ ವಾರದಲ್ಲಿ ಗೋಕಳ್ಳವರನ್ನು ಹೆಡೆಮುರಿ ಕಟ್ಟಿ, ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಸವಾಲು ಹಾಕಿದರು.
ಹೊರ ರಾಜ್ಯದ ಕಾರ್ಮಿಕರ ಆಧಾರ್ ಕಾರ್ಡ್‌ಗಳನ್ನು ಪೊಲೀಸ್ ಇಲಾಖೆ ಆ್ಯಪ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ನಕಲಿ ಕಾರ್ಡ್‌ಗಳ ಪತ್ತೆಯಾಗುತ್ತದೆ. ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಇನ್‌ಸ್ಪೆಕ್ಟರ್ ಮುದ್ದು ಮಹಾದೇವ ಹೇಳಿದರು.
ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುವ ವಾಹನ ಅಪಘಾತವಾಗಿದ್ದು, ಅದರಲ್ಲಿದ್ದ ಒಬ್ಬ ಆರೋಪಿಯನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಗಾವಲಿಗಿದ್ದ ವಾಹನನ್ನೂ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ವೇದಿಕೆ ಪ್ರಾಂತ ಕಾರ್ಯಕಾರಣಿ ಸುನಿಲ್ ಮಾದಾಪುರ, ಸಹ ಸಂಯೋಜಕರಾದ ಕುಮಾರ್ ಮೇಕೇರಿ, ಶರತ್ ಪೊನ್ನಂಪೇಟೆ, ಯೋಗೇಶ್ ವಿರಾಜಪೇಟೆ, ತಾಲೂಕು ಸಂಯೋಜಕ ಎಂ.ಉಮೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್ ಮತ್ತಿತರರು ಇದ್ದರು.