

ಪಾಂಡವಪುರ: ಅಮೃತ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಕಾರ್ಯಾದೇಶ ದೊರೆತು ಹಲವು ತಿಂಗಳಾದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕಾಮಗಾರಿ ಪ್ರಾರಂಭಿಸುವಂತೆ ಪುರಸಭೆ ಸದಸ್ಯ ಚಂದ್ರು ಮುಖ್ಯಾಧಿಕಾರಿ ವೀಣಾ ಅವರಿಗೆ ಮನವಿ ಮಾಡಿದರು.
ಪುರಸಭೆ ಕಚೇರಿಯಲ್ಲಿ ಸೋಮವಾರ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಮಾತನಾಡಿದ ಅವರು, ಅಮೃತ್ ಯೋಜನೆಗೆ 2023ರ ಮಾರ್ಚ್‌ನಲ್ಲಿ ಕಾರ್ಯಾದೇಶ ದೊರೆತಿದೆ. ಆದರೆ, ಗುತ್ತಿಗೆದಾರ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕೆಂದು ಪತ್ರ ಬರೆದಿದ್ದಾರೆ. ಗುತ್ತಿಗೆದಾರರು ಕೇಳಿದಂತೆ ಕಾಲಾವಕಾಶ ನೀಡಿದರೆ ಕಾಮಗಾರಿ ಪೂರ್ಣಗೊಂಡು ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವುದು ಯಾವಾಗ? ಈ ಹೊತ್ತಿಗಾಗಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಯೋಜನೆ ಅನುಷ್ಠಾನಕ್ಕಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಧಿಕಾರಾವಧಿಯಲ್ಲಿ 16.02 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಗುತ್ತಿಗೆದಾರರ ಮೇಲೆ ಒತ್ತಡ ತಂದು ಯೋಜನೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಅಮೃತ್ ಯೋಜನೆ ಪೂರ್ಣಗೊಳ್ಳದ ಪರಿಣಾಮ ನಗರೋತ್ಥಾನ ಯೋಜನೆಯ 4ನೇ ಹಂತದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಈ ಯೋಜನೆಗೆ ಸರ್ಕಾರ 4.59 ಕೋಟಿ ರೂ. ಅನುದಾನ ನೀಡಿದೆ. ಈ ಅನುದಾನದಲ್ಲಿ ಬಡಾವಣೆಗಳ ಚರಂಡಿ ಮತ್ತು ರಸ್ತೆ ಡಾಂಬರೀಕರಣ ಕೆಲಸವಾಗಬೇಕಿದೆ. ಈ ಯೋಜನೆಯ ಗುತ್ತಿಗೆದಾರರು ಚರಂಡಿ ಕೆಲಸ ಪೂರ್ಣಗೊಳಿಸಿ ಡಾಂಬರೀಕರಣ ಕೆಲಸ ಬಾಕಿ ಉಳಿಸಿಕೊಂಡಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಂಡು ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದರೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಪುರಸಭೆ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಇಂಜಿನಿಯರ್ ಚೌಡಪ್ಪ ಇದ್ದರು.