

ಕನಕಪುರ: ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಅಲೆದಾಡಿಸುತ್ತಿರುವುದಾಗಿ ನಗರಸಭೆಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಹೇಮರಾಜು ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯ ಚರ್ಚೆಯಲ್ಲಿ ಮಾತನಾಡಿದ ಸದಸ್ಯರಾದ ವಿಜಿ ಕುಮಾರ್, ಕಾಂತರಾಜು, ನಾಗರಾಜು ಸೇರಿ ಹಲವು ಸದಸ್ಯರು, ಕಂದಾಯ ಇಲಾಖೆ ನೌಕರರ ಕಾರ್ಯನಿರ್ವಹಣೆಯ ಲೋಪಗಳ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಇ- ಖಾತೆ, ಬಿ ಖಾತೆ ಮಾಡಿಕೊಡದೆ ಜನರನ್ನು ಅಲೆದಾಡಿಸುತ್ತಿದ್ದಾರೆ. ಜತೆಗೆ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇವರ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳು ಕುಂಠಿತವಾಗುತ್ತಿದೆ. ಇದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಿಗೆ ತಾಕೀತು ಮಾಡಿದರು.
ನಗರದ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಮಂದ ಬೆಳಕಿನ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬೆಳಕು ಸಾಕಾಗದೆ ನಗರದಲ್ಲಿ ಕತ್ತಲು ಆವರಿಸಿದಂತಾಗಿದೆ. ಕೂಡಲೇ ಇವುಗಳನ್ನು ಬದಲಾಯಿಸಿ ಪ್ರಕಾಶಮಾನವಾದ ಬಲ್ಬ್‌ಗಳನ್ನು ಅಳವಡಿಸಿ, ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪೌರಾಯುಕ್ತ ಎಂ.ಎಸ್.ಮಹದೇವ್ ಮಾತನಾಡಿ, ಸರ್ವರ್‌ನಂತಹ ತಾಂತ್ರಿಕ ಕಾರಣಗಳಿಂದ ಇ ಖಾತೆ ಹಾಗೂ ಬಿ ಖಾತೆ ನಿರ್ವಹಣೆಯಲ್ಲಿ ತೊಡಕಾಗಿದೆ. ಕೆಲವು ದಿನಗಳಿಂದ ಬಾಕಿ ಉಳಿದಿರುವ ಕಡತಗಳನ್ನು ಕಚೇರಿ ನಂತರ ಸಮಯದಲ್ಲೂ ಯಾವುದೇ ಸಬೂಬು ಹೇಳದೆ ಕಡತಗಳ ವಿಲೇವಾರಿ ಮಾಡುವಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಆದೇಶ ನೀಡಿದರು.
ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕೋಟೆ ಕಿರಣ್, ಮೀಸೆ ವೆಂಕಟೇಶ್, ಸದಸ್ಯರಾದ ಸರಳ ಶ್ರೀನಿವಾಸ್, ಮೋಹನ್, ವೀರೇಶ್, ಸ್ಟುಡಿಯೋ ಚಂದ್ರು ಇದ್ದರು.