

ಹುಣಸೂರು: ಶಿಥಿಲಾವಸ್ಥೆಯಲ್ಲಿರುವ ತಾಲೂಕು ಕಚೇರಿ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕೆಂದು ದಲಿತ ಸಂಘರ್ಷ ಸಮಿತಿ(ದಸಂಸ)ಸದಸ್ಯರು ಆಗ್ರಹಿಸಿದ್ದಾರೆ.
ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ ನಂತರ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಸೋಮವಾರ ಮಹಿಳೆಯೊಬ್ಬರ ಮೇಲೆ ಛಾವಣಿ ಸಿಮೆಂಟ್ ಕಾಂಕ್ರೀಟ್ ಬಿದ್ದು ಕಾಲು ಬೆರಳುಗಳು ನುಜ್ಜುಗುಜ್ಜಾಗಿವೆ. ಇಡೀ ಕಟ್ಟಡ ದುಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಿ ಕಡತಗಳ ಸಂರಕ್ಷಣೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನೋಂದಣಿ, ಖಜಾನೆ, ಪಡಿತರ, ಕಂದಾಯ ಸೇರಿದಂತೆ ಎಲ್ಲ ಪ್ರಮುಖ ಇಲಾಖೆಗಳು ಇದೇ ಕಟ್ಟಡದಲ್ಲಿದ್ದು ಸಾರ್ವಜನಿಕರು, ರೈತರು ಅನಿವಾರ್ಯವಾಗಿ ಜೀವಭಯದಿಂದಲೇ ಬಂದು ಹೋಗುತ್ತಿದ್ದಾರೆ.
ಯಾರ ಬಲಿಗಾಗಿ ಈ ಕಟ್ಟಡ ಕಾದಿದೆಯೋ ತಿಳಿದಿಲ್ಲ. ‘ವಿಜಯವಾಣಿ’ ಪತ್ರಿಕೆಯಲ್ಲಿ ಇತ್ತೀಚೆಗೆ ಕಟ್ಟಡದ ದುಸ್ಥಿತಿ ಕುರಿತು ವರದಿ ಪ್ರಕಟಗೊಂಡಿದ್ದು, ಆಗಲೂ ಆಡಳಿತ ಯಂತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ತಾಲೂಕು ಆಡಳಿತ ಈ ಕೂಡಲೇ ಕನಿಷ್ಠ ದುರಸ್ತಿ ಕಾರ್ಯವನ್ನಾದರೂ ನಡೆಸಿ ಸಾರ್ವಜನಿಕರಿಗೆ ಧೈರ್ಯ ತುಂಬಬೇಕು. 2018ರಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರ್ಚಿಸಿ ಹಳೇ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ, ದೂರವಾಣಿ ಮುಖಾಂತರ ಲೋಕೋಪಯೋಗಿ ಇಂಜಿನಿಯರ್ ಚಂದ್ರಶೇಖರ್ ಅವರನ್ನು ಸ್ಥಳಕ್ಕೆ ಕರೆಸಿ ಕುಸಿಯುವ ಹಂತದಲ್ಲಿರುವ ಭಾಗಗಳನ್ನು ಪರಿಶೀಲನೆ ಮಾಡಿ ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ದಲಿತ ಮುಖಂಡರಾದ ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ಮುರುಗೇಶ, ಮಾದ, ಲಕ್ಷ್ಮಣ ಇತರರಿದ್ದರು.