

ಮದ್ದೂರು: ಹಾಲು ಉತ್ಪಾದಕರಿಗೆ ಸಕಾಲಕ್ಕೆ ಪ್ರೋತ್ಸಾಹ ಧನ, ರೈತರಿಗೆ ಉಚಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ವತಿಯಿಂದ ಸಮೀಪದ ಗೆಜ್ಜಲಗೆರೆ ಮನ್‌ಮುಲ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಒಕ್ಕೂಟದ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಮಾತನಾಡಿ, ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಸರ್ಕಾರ ರೈತರ ಹಿತ ಮರೆತು ಪ್ರೋತ್ಸಾಹ ಧನ ನೀಡದೆ ವಂಚನೆ ಮಾಡುತ್ತಿರುವುದು ಸರಿಯಲ್ಲ. ಬೆಲೆ ಏರಿಕೆಯಿಂದ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ಸರ್ಕಾರ ಪ್ರೋತ್ಸಾಹ ಧನವನ್ನು ಸಕಾಲಕ್ಕೆ ನೀಡಬೇಕು. ಬಿತ್ತನೆ ಬೀಜವನ್ನು ರೈತರಿಗೆ ಉಚಿತವಾಗಿ ನೀಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಸೂಕ್ತ ಮಾರುಕಟ್ಟೆ, ತ್ವರಿತವಾಗಿ ಬರ ಪರಿಹಾರ ವಿತರಣೆ ಮಾಡಿ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ, ಮುಖಂಡರಾದ ರವಿಶೆಟ್ಟಿ ಬೈಂದೂರು, ಸಂಪತ್ ಕುಮಾರ್, ಪ್ರಶಾಂತ್, ಪುಷ್ಪಾ ಲೋಕೇಶ್, ಜಯಂತಿ, ಸವಿತಾ, ಮಾದೇಶ್, ಆಂಥೋನಿ, ರೂಪಾ, ಕೃಷ್ಣೇಗೌಡ ಇದ್ದರು.