

ಬೈಲಹೊಂಗಲ: ಮಲಪ್ರಭಾ ನದಿಗೆ ಅಡ್ಡಲಾಗಿ ಸಂಗೊಳ್ಳಿ ಮತ್ತು ಬೇವಿನಕೊಪ್ಪ ಗ್ರಾಮಗಳ ಮಧ್ಯ ನಿರ್ಮಾಣ ಹಂತದಲ್ಲಿರುವ ರಾಯಣ್ಣ ಸೇತುವೆ ಬಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಗೋಕಾಕ ಪಟ್ಟಣದಲ್ಲಿ ಬೇವಿನಕೊಪ್ಪ ಆನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಗೆ ಬುಧವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ವಿಜಯಾನಂದ ಸ್ವಾಮೀಜಿ, ಮನವಿಗೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗನೆ ರಾಯಣ್ಣನ ಸೇತುವೆ ಬಳಿ ರಾಯಣ್ಣನ ಮೂರ್ತಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಈ ಭಾಗದ ಮಾಜಿ, ಹಾಲಿ ಶಾಸಕರು, ಸಚಿವ ಎಚ್.ಕೆ.ಪಾಟೀಲ ಅವರ ಸಹಕಾರದಿಂದ ಸಚಿವ ಎಚ್.ಸಿ.ಮಹದೇವಪ್ಪನವರ ಮೂಲಕ ಹಣ ಬಿಡುಗಡೆಗೊಳಿಸಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಶ್ರೀದಲ್ಲೇ ಸೇತುವೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.