ಅಂಬೇಡ್ಕರ್ ಪುತ್ಥಳಿ ಅನಾವರಣಕ್ಕೆ ಶಾಸಕರಿಗೆ ಮನವಿ

IMG-20231008-WA0231
Published on

ಆಲೂರು: ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡುವಂತೆ ತಾಲೂಕು ದಲಿತ ಮುಖಂಡರು ಶಾಸಕ ಸಿಮೆಂಟ್ ಮಂಜುನಾಥ್ ಅವರಿಗೆ ಮನವಿ ಮಾಡಿದರು.


ಇತ್ತೀಚೆಗೆ ಶಾಸಕರನ್ನು ಭೇಟಿ ಮಾಡಿದ ಮುಖಂಡರು, ಪುತ್ಥಳಿ ನಿರ್ಮಾಣಗೊಂಡು ಮೂರು ತಿಂಗಳಾದರೂ ಅನಾವರಣಕ್ಕೆ ಕಾಲ ಕೂಡಿ ಬಂದಿಲ್ಲ. ಹಲವು ವರ್ಷಗಳ ಹೋರಾಟದಿಂದ ತಾಲೂಕು ಕಚೇರಿ ಎದುರು ಪುತ್ಥಳಿ ನಿರ್ಮಾಣಗೊಂಡಿದೆ. 3 ತಿಂಗಳ ಹಿಂದೆ ನಿಮ್ಮ ಅಧ್ಯಕ್ಷತೆಯಲ್ಲಿ ದಲಿತ ಮುಖಂಡರ ಸಭೆ ನಡೆದು ದಿನಾಂಕ ನಿಗದಿ ಮಾಡಲಾಗಿತ್ತು. ರಾಜಕೀಯ ಹಿನ್ನೆಲೆಯಲ್ಲಿ ಕೆಲವು ದಲಿತ ವಿರೋಧಿಗಳು ಉಸ್ತುವಾರಿ ಸಚಿವರಿಗೆ ಇಲ್ಲಸಲ್ಲದ್ದು ಹೇಳಿ ಕಾರ್ಯಕ್ರಮ ಮುಂದೂಡಿಸಿದರು. ಆದ್ದರಿಂದ ನೀವು ದಿನಾಂಕ ನಿಗದಿ ಮಾಡಿ ಪುತ್ಥಳಿ ಅನಾವರಣ ಮಾಡುವಂತೆ ಒತ್ತಾಯಿಸಿದರು.


ಇದಕ್ಕೆ ಸ್ಪಂದಿಸಿದ ಶಾಸಕರು ಎರಡು, ಮೂರು ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ದಿನಾಂಕ ಕೇಳುತ್ತೇನೆ. ಅವರಿಗೆ ಒಂದು ವಾರ ಕಾಲಾವಕಾಶ ನೀಡೋಣ. ಅವರು ಬಂದರೆ ಸಂತೋಷ, ಇಲ್ಲವಾದಲ್ಲಿ ನಾನೇ ನಿಮ್ಮ ಜತೆ ಸೇರಿ ಅನಾವರಣ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಗೇಕರವಳ್ಳಿ ಬಸವರಾಜ್, ದೇವರಾಜ್, ಅಜ್ಜೆನಹಳ್ಳಿ ರಂಗಯ್ಯ, ಹರೀಂದ್ರ, ಮಂಜುನಾಥ್, ಸುಳುಗೋಡು, ಹನುಮಯ್ಯ, ಅರಸಪ್ಪ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net