

ಕಡಬ: ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಆಗ್ರಹಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಕಡಬದ ಎಪಿಎಂಸಿ ಪ್ರಾಂಗಣದ ಬಳಿ ಬೃಹತ್ ಪ್ರತಿಭಟನೆ ಸೋಮವಾರ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಸರ್ಕಾರ ಪಶ್ಚಿಮ ಘಟ್ಟ ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಜನವಿರೋಧಿ ಯೋಜನೆಗಳನ್ನು ಹಮ್ಮಿಕೊಂಡಿರುವುದರಿಂದ ರೈತರು ಆತಂಕ ಸ್ಥಿತಿಯಲ್ಲಿದ್ದಾರೆ. ದೇಶದ ಬೆನ್ನೆಲುಬು ರೈತ ಎಂಬ ಧೈಯ ವಾಕ್ಯ ಇದ್ದರೂ ರೈತರಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದರು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಿಗೆ ಪ್ರತ್ಯೇಕ ಕಾನೂನು ತರಬೇಕು, ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಸಂಪೂರ್ಣವಾಗಿ ಕೈಬಿಡಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಂದಾಯ ಇಲಾಖೆ ಅಕ್ರಮ ಸಕ್ರಮ , 94ಸಿ ಅಡಿಯಲ್ಲಿ ರೈತರಿಗೆ ಹಕ್ಕುಪತ್ರ ವಿತರಿಸಿದೆ. ಹಕ್ಕುಪತ್ರ ಪಡೆದ ರೈತರು ಕೃಷಿ , ಇನ್ನಿತರ ಚಟುವಟಿಕೆಯನ್ನು ಆ ಭೂಮಿಯಲ್ಲಿ ಮುಂದುವರಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಇದರಿಂದ ರೈತರು ಗೊಂದಲದಲ್ಲಿದ್ದಾರೆ. ಕಂದಾಯ ಇಲಾಖೆ ರೈತರಿಗೆ ಆಗುವ ಅನ್ಯಾಯದ ವಿರುದ್ಧ ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಬೇಕು, ಅರಣ್ಯ ಮತ್ತು ಕಂದಾಯ ಭೂಮಿಗಳ ಗಡಿಗುರುತು ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಾಗೂ ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಆಗ್ರಹಿಸಿ ಮನವಿಯನ್ನು ಕಡಬ ತಹಸೀಲ್ದಾರ್‌ಗೆ ಸಲ್ಲಿಸಲಾಯಿತು. ಉಪತಸೀಲ್ದಾರ ಸಹಿದುಲ್ಲಾ ಖಾನ್ ಮನವಿ ಸ್ವೀಕರಿಸಿದರು. ದಾಮೋದರ ಗುಂಡ್ಯ ಮನವಿ ವಾಚಿಸಿ ವಂದಿಸಿದರು.
ಪ್ರಮುಖರಾದ ಅಚ್ಯುತ ಗೌಡ, ಆಶೋಕ್ ಕುಮಾರ್ ಸುಬ್ರಹ್ಮಣ್ಯ, ಹರೀಶ್ ಕಲ್ಲುಗುಂಡಿ, ಯಶೋಧರ ಕೊಣಾಜೆ, ಕೃಷ್ಣ ಶೆಟ್ಟಿ ಕಡಬ, ಮೀರಾ ಸಾಹೇಬ್, ಮೇದಪ್ಪ ಗೌಡ, ಸನ್ನಿ ಉದನೆ, ಗಣೇಶ್ ಅನಿಲ, ಪ್ರಸನ್ನ ಕುಮಾರ್ ಮಣಿಬಾಂಡ ಮೊದಲಾದವರು ಉಪಸ್ಥಿತರಿದ್ದರು.