

ಕೆ.ಎಂ.ದೊಡ್ಡಿ: ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಮಾನವ ಸರಪಳಿ ರಚಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಒಂದರಿಂದ ಆರನೇ ನಾಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರಿಲ್ಲದೇ ಬೆಳೆಗಳು ಒಣಗುತ್ತಿದೆ. ಬೆಳೆಗಳಿಗೆ ನೀರು ಹರಿಸಲುಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೆಯ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನು ನೀಡದೆ ವಂಚಿಸಿದ್ದಾರೆ. ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಲು ನೀರಿಲ್ಲದೆ ರೈತರು ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ನೀರು ಹರಿಸಬೇಕು ಎಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊನೆಭಾಗಕ್ಕೆ ನೀರು ನೀಡದೆ ಕೃತಕ ಬರಗಾಲ ಸೃಷ್ಟಿಸಿದ್ದಾರೆ. ಕಾಮಗಾರಿ ಹೆಸರಿನಲ್ಲಿ ರೈತರಿಗೆ ನೀರು ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ವಿ.ಸಿ ನಾಲೆ ಹಾಗೂ ಲೋಕಸರ ನಾಲೆಗಳ ಮೂಲಕ ಕೊನೆಭಾಗಕ್ಕೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ತಾಲೂಕು ಅಧ್ಯಕ್ಷ ವರಗೆರೆಹಳ್ಳಿ ಉಮೇಶ್, ಕಾರ್ಯದರ್ಶಿ ವಿನೋದ್ ಬಾಬು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಬನ್ನಹಳ್ಳಿ ರಮೇಶ್, ಮುಟ್ಟನಹಳ್ಳಿ ವೆಂಕಟೇಶ್, ಪಟೇಲ್ ಬೋರೇಗೌಡ, ದೇಶಿಗೌಡ, ಸಾವಿತ್ರಮ್ಮ, ನಾಗರತ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.