

ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಸುತ್ತ ನಡೆಯುತ್ತಿರುವ ಜಲ್ಲಿ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಆಗ್ರಹಿಸಿ ತಾಲೂಕು ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕಸವನಹಳ್ಳಿ ಗ್ರಾಮದ ಮಧು ಮಾತನಾಡಿ, ಕಲ್ಲು ಗಣಿಗಾರಿಕೆಯ ಸ್ಪೋಟದಿಂದ ಮನೆ, ಶಾಲೆ ಗೋಡೆಗಳು ಬಿರುಕು ಬಿಟ್ಟಿದ್ದು ಜನರು ಜೀವ ಭಯದಿಂದ ಬದುಕು ನಡೆಸುವಂತಾಗಿದೆ. ನಿಯಮ ಉಲ್ಲಂಘಿಸಿ ಸ್ಫೋಟಕ ಬಳಸುತ್ತಿದ್ದು, ಕೊಳವೆ ಬಾವಿಗಳು ಮಣ್ಣಿನಲ್ಲಿ ಮುಚ್ಚಿ ಹೋಗುತ್ತಿವೆ. ಚಿರತೆ, ಕರಡಿ ಸೇರಿದಂತೆ ಕಾಡು ಪ್ರಾಣಿಗಳು ನಾಡಿನತ್ತ ನುಗ್ಗಿ ಅನ್ನದಾತನ ಜೀವಕ್ಕೆ ಸಂಚಕಾರ ತಂದಿರುವ ಅನೇಕ ನಿದರ್ಶನವಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಶಾಲೆಗೆ ತೆರಳುವ ಮಕ್ಕಳು ಮನೆಗೆ ವಾಪಸ್ ಮರಳುವುದನ್ನು ಪಾಲಕರು ಆತಂಕದಿಂದ ನೋಡುವಂತಾಗಿದೆ. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಅಕ್ರಮ, ಅನಧಿಕೃತ ಸ್ಪೋಟಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಬಳೀಕ ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮುಖಂಡರಾದ ಕಸವನಹಳ್ಳಿ ಹರಿಪ್ರಸಾದ್, ಶಿವಣ್ಣ, ಸೋಮಶೆಟ್ಟಿಹಳ್ಳಿ ವಿಜಯ ಕುಮಾರ್ ಅಪ್ಪು, ಕಲ್ಗುಂಡಿ ವಸಂತ್ ಆಚಾರ್, ರಂಗನಾಥ್, ಗಿರಿಬೊಮ್ಮನಹಳ್ಳಿ ಹರೀಶ್ ಇತರರು ಇದ್ದರು.