

ಹುಣಸೂರು: ಹುಣಸೂರು ನಗರಸಭೆ ವರಿಷ್ಠ ಗಾದಿಗೆ ಚುನಾವಣೆ ನಡೆಸಲು ಉಪವಿಭಾಗಾಧಿಕಾರಿ ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಜೆಡಿಎಸ್, ಬಿಜೆಪಿ ಸದಸ್ಯರು ಹಾಗೂ ಪಕ್ಷದ ಕಾರ್ಕರ್ತರು ಪ್ರತಿಭಟನೆ ನಡೆಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದ ಸದಸ್ಯರು ಉಪವಿಭಾಗಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರಸಭೆ ಸದಸ್ಯ ಎಚ್.ಪಿ.ಸತೀಶ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಆ.5ರಂದು ಪ್ರಕಟಿಸಿದೆ. ಅದರಂತೆ ಹುಣಸೂರು ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದೆ. ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿ(ಚುನಾವಣಾಧಿಕಾರಿಯಾಗಿದ್ದಾರೆ)ಗೆ ಆ.24ರಂದು ಚುನಾವಣೆ ನಡೆಸಲು ಕ್ರಮಕೈಗೊಳ್ಳಲು ಲಿಖಿತ ಆದೇಶ ನೀಡಿದ್ದಾರೆ ಎಂದರು.
ಆದೇಶ ದೊರತು 5 ದಿನಗಳಾದರೂ ಉಪವಿಭಾಗಾಧಿಕಾರಿ ಚುನಾವಣಾ ದಿನಾಂಕ ಘೋಷಿಸಿಲ್ಲ. ಇದು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾಡುತ್ತಿರುವ ಅನ್ಯಾಯ. ಎರಡೂವರೆ ವರ್ಷಗಳ ಬಾಕಿ ಅವಧಿಯಲ್ಲಿ ಈಗಾಗಲೇ 16 ತಿಂಗಳನ್ನು ಸರ್ಕಾರ ಹಾಳು ಮಾಡಿದೆ. ಇನ್ನು 14 ತಿಂಗಳು ಮಾತ್ರ ಉಳಿದಿದೆ. ಅಧಿಕಾರಿಗಳು ಕೆಲ ಕಾಣದ ಕೈಗಳ ಕೈಗೊಂಬೆಯಾಗಿ ನಡೆದುಕೊಂಡು ಸಂವಿಧಾನಾತ್ಮಕವಾದ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಈ ನಡುವೆ ನಗರಸಭೆ ಸಾಮಾನ್ಯ ಸಭೆ ಆಯೋಜಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಮುಂದಾಗಿದ್ದರು. ಅದನ್ನು ಸದಸ್ಯರು ಆಕ್ಷೇಪಿಸಿ ನಿಲ್ಲಿಸಿದ್ದೇವೆ. ಉಪವಿಭಾಗಾಧಿಕಾರಿ ಕೂಡಲೇ ಚುನಾವಣಾ ದಿನಾಂಕ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ದೊಡ್ಡಹೆಜ್ಜೂರು ರಮೇಶ್ ಮಾತನಾಡಿ, ಅಧಿಕಾರಿಗಳ ಈ ನಡವಳಿಕೆ ಸಂವಿಧಾನ ವಿರೋಧಿಯಾಗಿದೆ. ಜನರಿಂದ ಆಯ್ಕೆಯಾದ ನಮ್ಮನ್ನು ಕಡೆಗಣಿಸುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಕೆಲವರ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಶೀಘ್ರ ಚುನಾವಣಾ ದಿನಾಂಕ ಘೋಷಿಸಿವುದಾಗಿ ಭರವಸೆ ನೀಡಿದರು. ಸದಸ್ಯರಾದ ಗಣೇಶ್‌ಕುಮಾರಸ್ವಾಮಿ, ಜೆಡಿಎಸ್ ಸದಸ್ಯರಾದ ಶರವಣ, ಕೃಷ್ಣರಾಜ ಗುಪ್ತ, ಹರೀಶ್, ದೇವರಾಜ್, ರಾಧಾ, ರಾಣಿ ಪೆರುಮಾಳ್, ಆಶಾನಾಯಕ, ಶಾಹಿನ್ ತಾಜ್, ವಿವೇಕಾನಂದ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಅಸ್ವಾಳ್ ಕೆಂಪೇಗೌಡ, ರಮೇಶ್ ಹಾಜರಿದ್ದರು.