ಮುನಿರತ್ನ ಶಾಸಕತ್ವ ರದ್ದುಗೊಳಿಸಲು ಆಗ್ರಹ

19-pnp 1
Published on

ಪಾಂಡವಪುರ: ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದಡಿ ಬಂಧಿತರಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ಶಾಸಕತ್ವವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತಸಂಘ ಮತ್ತು ದಲಿತಪರ ಸಂಘಟನೆ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.


ತಾಲೂಕು ಆಡಳಿತಸೌಧದ ಮುಂದೆ ಜಮಾವಣೆಗೊಂಡ ರೈತಸಂಘ ಮತ್ತು ದಲಿತ ಸಂಘಟನೆ ಒಕ್ಕೂಟ ಮತ್ತು ಪ್ರಗತಿಪರ ಒಕ್ಕೂಟ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಸಾಂವಿಧಾನಿಕ ಹುದ್ದೆ ಆಲಂಕರಿಸಿರುವ ಶಾಸಕರು ಜಾತಿ ನಿಂದನೆಯ ಜತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಕಮಿಷನ್ ಆಸೆಗಾಗಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮತ್ತು ಆತನ ಬೆಂಬಲಕ್ಕೆ ನಿಂತಿದ್ದ ವ್ಯಕ್ತಿಯ ವಿರುದ್ಧ ಅಸಹನೀಯ ಮಾತುಗಳಾನ್ನಾಡುವ ಮೂಲಕ ಶಾಸಕ ಸ್ಥಾನಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.


ಸಂತ್ರಸ್ತರ ದೂರಿನ ಮೇರೆಗೆ ಮುನಿರತ್ನ ಅವರ ಬಂಧನವಾಗಿದೆ. ಆದರೆ ಇಂತಹ ದುರ್ನಡತೆ ಹೊಂದಿರುವ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ಸಂತೋಷ್ ಅವರ ಮೂಲಕ ವಿಧಾನಸಭಾ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.


ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಸಚಿವರಾಗಿ, ಶಾಸಕರಾಗಿ ಅನುಭವ ಹೊಂದಿರುವ ಶಾಸಕ ಮುನಿರತ್ನ ಅವರು ಅಧಿಕಾರ ಮತ್ತು ಹಣದ ಮದದಿಂದ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯದ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧ. ರಾಜ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ. ಅದರ ಬಗ್ಗೆ ಚಕಾರ ಎತ್ತದ ಶಾಸಕರು ಲಂಚದ ಹಣಕ್ಕಾಗಿ ಜಾತಿಗಳ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.


ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ವಿಚಾರ ರಾಜ್ಯದಲ್ಲಿ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದಲ್ಲಿ ಮರುಕಳಿಸುತ್ತವೆ. ಕನಿಷ್ಠ ಜ್ಞಾನ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡಿರುವ ಮುನಿರತ್ನ ಅವರ ಶಾಸಕತ್ವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಉಪಾಧ್ಯಕ್ಷ ಹಾರೋಹಳ್ಳಿ ಲಕ್ಷ್ಮೇಗೌಡ, ಮುಖಂಡರಾದ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು, ದಲಿತ ಸಂಘಟನೆ ಮುಖಂಡರಾದ ಡಿ.ಕೆ.ಅಂಕಯ್ಯ, ಬ್ಯಾಡರಹಳ್ಳಿ ಪ್ರಕಾಶ್, ಹಾಳಯ್ಯ, ಕನಗನಮರಡಿ ಕೃಷ್ಣಮೂರ್ತಿ, ಮಂಡಿಬೆಟ್ಟಹಳ್ಳಿ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net