ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ

23-05-rama-protest aibsp
Published on

ರಾಮನಗರ: ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ದಲಿತ ಯುವಕರ ಮೇಲೆ ಹಲ್ಲೆಮಾಡಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.

ದಲಿತ ಯುವಕರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಎಐಬಿಎಸ್ಪಿ ಕಾರ್ಯಕರ್ತರು ಹಾಗೂ ದೇವರಹಳ್ಳಿ ಗ್ರಾಮಸ್ಥರು ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ವೇಳೆ ಎಐ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಮಾತನಾಡಿ, ದಲಿತ ಯುವಕರ ಮೇಲೆ ಹಲ್ಲೆ ಮಾಡಿರುವ ದುರ್ಷ್ಕಮಿಗಳು ಶಾಸಕರ ಬೆಂಬಲಿಗರಾಗಿದ್ದಾರೆ. ಹಾಗಾಗಿ ರಾಜಕೀಯ ಪ್ರಭಾವಕ್ಕೆ ಮಣಿದು ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ದೇವರಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಗ್ರಾಮದೇವತೆ ಹಬ್ಬದ ಸಮಯದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ದಲಿತ ಯುವಕರಾದ ನಾಗರಾಜು ಮತ್ತು ಅಂಜನ್ ಅವರು ಹಾರನ್ ಮಾಡಿ ದಾರಿ ಬಿಡುವಂತೆ ಕೇಳಿದ್ದಕ್ಕೆ, ಸವರ್ಣೀಯರು ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದಿದ್ದರು. ಈ ಘಟನೆ ನಡೆದ ಬಳಿಕ

ದಲಿತ ಇಬ್ಬರು ಯುವಕರು ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ರಸ್ತೆ ಮಧ್ಯೆ ಕಾರನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆದು ಐದು ದಿನ ಕಳೆದರೂ ಆರೋಪಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಈ ಘಟನೆಯಿಂದಾಗಿ ಗ್ರಾಮದಲ್ಲಿ ದಲಿತರು ಭಯದಿಂದ ಜೀವನ ಕಳೆಯುವಂತಾಗಿದೆ. ದೇವರಹಳ್ಳಿ ಗ್ರಾಮದಿಂದ ನೂರಾರು ಮಂದಿ ದಲಿತರು ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕಾಗಿ ಹೋಗಿ ಬರುತ್ತಿದ್ದಾರೆ. ಈ ಘಟನೆಯಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರು ತಕ್ಷಣ ಕ್ರಮ ಜರಿಗಿಸುವ ಮೂಲಕ ಜನತೆ ನೆಮ್ಮದಿಯ ಜೀವನನಡೆಸುವ ವಾತಾವರಣ ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಸುರೇಶ್ ಮನವಿಯನ್ನು ಅಲಿಸಿದರು. ಆರೋಪಿಗಳನ್ನು ಬಂಧಿಸಿಕಾನೂನು ಕ್ರಮ ಜರುಗಿಸುವುದಾಗಿ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಕುಸಿದು ಬಿದ್ದ ಯುವಕ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹರ್ಷ ಎಂಬ ಯುವಕ ಪ್ರತಿಭಟನೆ ನಡೆಯುತ್ತಿರುವಾಗಲೇ ಕುಸಿದು ಬಿದ್ದ ಘಟನೆ ನಡೆಯಿತು. ಕುಸಿದುಬಿದ್ದ ಯುವಕನನ್ನು ತಕ್ಷಣ ಜತೆೆಯಲ್ಲಿದ್ದವರು ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಿಸಿಲಿನಲ್ಲಿ ತಾಸುಗಟ್ಟಲೆ ಕುಳಿತ ಕಾರಣ ಯುವಕ ಅಸ್ವಸ್ಥತಗೊಂಡಿದ್ದಾನೆ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ, ಜಿಲ್ಲಾಧ್ಯಕ್ಷ ವೆಂಕಟಾಚಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ರಮೇಶ್, ಮುಖಂಡರಾದ ತುಂಬೇನಹಳ್ಳಿ ಭೈರವ, ಟಿ.ಹೊಸಹಳ್ಳಿ ಪ್ರದೀಪ್, ದೇವರಹಳ್ಳಿ ಸ್ವಾಮಿ, ನವೀನ್, ಬೋರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net