ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹ

15-GPT-3
Published on

ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಜಾನುವಾರುಗಳಿಗೆ ಮೇವು ಪೂರೈಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.


ರೈತ ಸಂಘದ ತಾಲೂಕು ಅಧ್ಯಕ್ಷ ದಿಲೀಪ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತರು, ಬರದ ಪರಿಣಾಮ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರೂ ಕೆರೆಗಳಿಗೆ ನೀರು ಹರಿಸಿಲ್ಲ. ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.


ನಂತರ ತಾಲೂಕು ಕಚೇರಿಗೆ ತೆರಳಿದ ರೈತರನ್ನು ಉಪವಿಭಾಗಾಧಿಕಾರಿ ಶಿವಶಂಕರ್, ತಹಸೀಲ್ದಾರ್ ಮಂಜುನಾಥ್ ಭೇಟಿ ಮಾಡಿ ಚುನಾವಣಾ ನೀತಿ ಸಂಹಿತೆ ಜಾರಿಯಿರುವುದರಿಂದ ಪ್ರತಿಭಟನೆ ಕೈಬಿಡುವಂತೆ ಕೋರಿದರು. ಏ. 17ರಂದು ಜಿಲ್ಲಾಧಿಕಾರಿ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಆದ್ದರಿಂದ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗೆ ತಲುಪಿಸಲಾಗುವುದು ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನೆ ಕೈಬಿಟ್ಟು ಮನವಿ ಪತ್ರ ಸಲ್ಲಿಸಿದರು.


ಹಂಗಳ ಮಾಧು, ತೆರಕಣಾಂಬಿ ಶಾಂತಮಲ್ಲಪ್ಪ, ಮಹೇಶ್ ನಾಯ್ಕ, ಮಹದೇವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net