ಗಣಿಗಾರಿಕೆಗೆ ಪರವಾನಗಿ ನೀಡದಂತೆ ಆಗ್ರಹ

ಗಣಿಗಾರಿಕೆಗೆ ಪರವಾನಗಿ ನೀಡದಂತೆ ಆಗ್ರಹ
Published on

ಹಾಸನ: ಆಲೂರು ತಾಲೂಕು ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಸ್ಫೋಟಕ್ಕೆ ಕಾಡು ಪ್ರಾಣಿಗಳು ಊರಿನ ಒಳಗೆ ಬರುತ್ತಿವೆ. ಅಲ್ಲದೆ ಅನೇಕ ಮನೆಗಳು ಬಿರುಕು ಬಿಟ್ಟಿದ್ದು ಜನರು ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣ ವೇದಿಕೆ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿತು.ಗಣಿಗಾರಿಕೆ ನಡೆಸಲು ಹೊಸದಾಗಿ ಯಾರಿಗೂ ಲೈಸೆನ್ ನೀಡಬಾರದು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ, ಆಲೂರು ತಾಲೂಕು, ಹೊಸಕೋಟೆ ಹೋಬಳಿ, ಮಗ್ಗೆ ಗ್ರಾಮ ಪಂಚಾಯತಿ, ಶಿಲುಬೆ ಬೆಟ್ಟದ ಸರ್ವೆ ನಂ.151ರಲ್ಲಿ ನಡೆಯುತ್ತಿರುವ ಸ್ಫೋಟದಿಂದ ಕಾಡು ಪ್ರಾಣಿಗಳು ಊರಿನೊಳಗೆ ನುಗ್ಗುತ್ತಿವೆ. ಆನೆಗಳು ಹಾಗೂ ಇತರ ಕಾಡು ಪ್ರಾಣಿಗಳು ಗ್ರಾಮಕ್ಕೆ ಬಂದು ಜನರ ಆಸ್ತಿ-ಪಾಸ್ತಿಗೆ ಹಾನಿ ಉಂಟುಮಾಡುತ್ತಿವೆ. ಗ್ರಾಮಸ್ಥರು ಓಡಾಡುವ ರಸ್ತೆ ಹಾಳಾಗಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಿದೆ ಎಂದರು.

ಈ ಹಿಂದೆ ಸಾವಿರಕ್ಕೂ ಹೆಚ್ಚು ಜನ ಸೇರಿ ಜಿಲ್ಲಾಧಿಕಾರಿ ಕಚೇರಿ ಮತ್ತು ಎನ್‌ಆರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಜಿಲ್ಲಾಡಳಿತ ಸ್ಪಂದಿಸಿ ಗಣಿಗಾರಿಕೆಯನ್ನು ನಿಲ್ಲಿಸಿತ್ತು. ಆದರೆ, ಈಗ ಮತ್ತೆ ಪರವಾನಗಿ ಪಡೆಯಲು ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು. ಮತ್ತೆ ಗಣಿಗಾರಿಕೆ ಆರಂಭವಾದರೆ ಈಗಾಗಲೇ ಬಿರುಕು ಬಿಟ್ಟಿರುವ ಮನೆಗಳು ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ಕಾಡುಪ್ರಾಣಿಗಳು ಊರಿಗೆ ದಾಳಿ ಮಾಡುವ ಭೀತಿ ಎದುರಾಗುತ್ತದೆ. ಸಾರ್ವಜನಿಕರು ನೆಮ್ಮದಿಯಿಂದ ಬದುಕುವುದು ಅಸಾಧ್ಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಸುಧಾ ಗಿರೀಶ್, ತಾಲೂಕು ಅಧ್ಯಕ್ಷ ಎಚ್.ಕೆ.ದಿನೇಶ್, ವೆಂಕಟೇಶ್ ಗೌಡ, ಮಂಜೇಗೌಡ, ಬಿ.ಕೆ.ರೇವಣ್ಣ, ಅರುಣ್ ಭಾಸ್ಕರ್, ಆರೀಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net