

ಸಕಲೇಶಪುರ: ರೈತರು ದೇಶದ ಬೆನ್ನೆಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ಬೇಡ. ಯುವ ರೈತರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ. ಸರ್ಕಾರ ರೈತರಿಗೆ ಈಗಿರುವ ಕೃಷಿ ಭಾಗ್ಯ, ಅನ್ನಭಾಗ್ಯ ಯೋಜನೆಯಂತೆ ಕನ್ಯಾ ಭಾಗ್ಯ ಯೋಜನೆ ಜಾರಿಗೊಳಿಸಬೇಕು ಎಂದು ರೈತರೊಬ್ಬರು ಶಾಸಕರಿಗೆ ಮನವಿ ಮಾಡಿದರು.
ತಾಲೂಕಿನ ಹೆತ್ತೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ರೈತ ಲಿಂಗರಾಜು ಮಾತನಾಡಿ, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಇದರಿಂದ ಹಲವು ಯುವ ರೈತರು ಅವಿವಾಹಿತರಾಗಿ ಉಳಿಯುವಂತಾಗಿದೆ. ಅವಿವಾಹಿತ ರೈತರ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳಿಗೆ ನೀಡುವಂತೆ ರೈತರಿಗೂ ಮಾಸಿಕ ವೇತನ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿಮೆಂಟ್ ಮಂಜು, ಹಳ್ಳಿಗಳಲ್ಲಿ ಕೃಷಿ ಮಾಡುವವರಿಗೆ ಹೆಣ್ಣು ನೀಡದಿರುವುದು ನನಗೆ ಗೊತ್ತಿದೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ರೈತನನ್ನು ಸಮಾಧಾನಪಡಿಸಿದರು.
ಗ್ರಾಮ ಸಭೆಗೆ ತೋಟಗಾರಿಕೆ, ಕೃಷಿ, ಜಿಪಂ ಕುಡಿಯುವ ನೀರು ನೈರ್ಮಲ್ಯ, ಪಶುಪಾಲನೆ, ಸಾರಿಗೆ, ಸೆಸ್ಕ್ ಅಧಿಕಾರಿಗಳು ಮಾತ್ರ ಹಾಜರಿದ್ದರು. ನಂತರ ಶಾಸಕರು ದೂರವಾಣಿ ಕರೆ ಮಾಡಿ ಅರಣ್ಯ, ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು.
ಹೆತ್ತೂರು ಹೋಬಳಿಯ ರೈತ ಸಂಪರ್ಕ ಅಧಿಕಾರಿ ಕೇಶವಮೂರ್ತಿ ಮಾತನಾಡಿ, ಭತ್ತದ ಬೆಳೆ ಬೆಳೆಯಲು ತುಂಗಾ 320 ಬಿತ್ತನೆ ಬೀಜ ವಿತರಿಸಲಾಗಿದೆ. ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ ಎಂದರು. ಈ ಮಧ್ಯೆ ಕೆಲ ರೈತರು ಮಾತನಾಡಿ, ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಏಜೆನ್ಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಏಜೆನ್ಸಿ ವಿರುದ್ದ 3 ಬಾರಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಫಿ ಮಂಡಳಿ ಅಧಿಕಾರಿಗಳು ಮಾತನಾಡಿ, ಕಾಫಿ ತೋಟಗಳಲ್ಲಿ ಕೆರೆ ಹಾಗೂ ಸ್ಪಿಂಕ್ಲರ್ ಅಳವಡಿಸಲು ಶೇ.40 ಸಬ್ಸಿಡಿ ನೀಡಲಾಗುವುದು. ಇದರ ಸದುಪಯೋಗ ಪಡೆಯಲು ಬೆಳೆಗಾರರು ಮುಂದಾಗಬೇಕು ಎಂದರು.
ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ದೇವರಾಜು ಮಾತನಾಡಿ, ಅರಣ್ಯ ಇಲಾಖೆಯವರು ದಿನನಿತ್ಯ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ರಕ್ಷಿತಾರಣ್ಯ ಹಾಗೂ ಸೆಕ್ಷನ್ 4 ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಮರಗಸಿ ಮಾಡಲು ಬಿಡುತ್ತಿಲ್ಲ. ಯಸಳೂರು ವಲಯ ಅರಣ್ಯಾಧಿಕಾರಿ ವರ್ತನೆ ಸರಿಯಿಲ್ಲ. ರೈತರಿಗೆ, ಸಿಬ್ಬಂದಿಗೆ ಗೌರವ ಕೊಡುವುದಿಲ್ಲ ಎಂದರು ಆರೋಪಿಸಿದರು.
ಬಳಿಕ ಮಾತನಾಡಿದ ಶಾಸಕರು, ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅರಣ್ಯ ಇಲಾಖೆಯ ದೌರ್ಜನ್ಯ ಮಿತಿ ಮೀರಿದೆ. ರೈತರ ಮೇಲೆ ಇದೇ ರೀತಿ ದೌರ್ಜನ್ಯವೆಸಗುವುದು ಮುಂದುವರಿಸಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ. ಕಂದಾಯ ಇಲಾಖೆಯಿಂದ 94 ಸಿ ಅಡಿ ಹಕ್ಕುಪತ್ರಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆತ್ತೂರು ಗ್ರಾಪಂ ಅಧ್ಯಕ್ಷೆ ಅನುಸೂಯಾ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಮಲ್ಲೇಶ್, ರಕ್ಷಿತಾ ಹಾಜರಿದ್ದರು.