ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ

FotoJet (1)
Published on

ದಲಿತ ಮುಖಂಡರ ಎಚ್ಚರಿಕೆ ಮೂರು ದಿನ ಪೂರೈಸಿದ ಪ್ರತಿಭಟನೆ

ಗುಡಿಬಂಡೆ: ನಿವೇಶನ, ಭೂಮಿ ಮಂಜೂರು, ಮೂಲಸೌಕರ್ಯ, ದಲಿತರ ಮೇಲಿನ ದೌರ್ಜನ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ಮೂರು ದಿನ ಪೂರೈಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.

ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ಮಾತನಾಡಿ, ಕಳೆದೆರಡು ದಿನಗಳಿಂದ ನ್ಯಾಯಪರ ಬೇಡಿಕೆ ಮುಂದಿಟ್ಟುಕೊಂಡು ಸಮಿತಿ ಹೋರಾಟ ನಡೆಸುತ್ತಿದೆ. ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರಿಯಲಿದೆ. ಪ್ರಮುಖ ಬೇಡಿಕೆಗಳಾದ ನಿವೇಶನ, ತಾಲೂಕಿನ ವ್ಯಾಪ್ತಿಯಲ್ಲಿ ಫಾರಂ ನಂ.50, 53, 57ರಲ್ಲಿ ಅರ್ಜಿ ಸಲ್ಲಿಸಿದ ದಲಿತರಿಗೆ ಭೂಮಿ ನೀಡುವುದು, ಮಾಚಹಳ್ಳಿ ಗ್ರಾಮದ ವಡ್ಡರ ನಾರಾಯಣಪ್ಪ ಎಂಬುವವರ ಅಮಾನಿ ಬೈರಸಾಗರ ಸರ್ವೇ ನಂ.474ಕ್ಕೆ ಸಂಬಂಧಿಸಿದಂತೆ ಆಗಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕಿಸುವುದು, ಸೋಮಲಾಪುರ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಭೂಮಿ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಒ ನಾಗಮಣಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ ಅವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಅಧಿಕಾರಿಗಳ ಮಾತಿಗೆ ಒಪ್ಪದ ಪ್ರತಿಭಟನಾಕಾರರು, ಬೇಡಿಕೆಗಳನ್ನು ಈಡೇರಿಸುವ ತನಕ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ರೈತ ಸಂಘಟನೆಯಿಂದಲೂ ದಲಿತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ದಲಿತ ಮುಖಂಡರಾದ ಇಸ್ಕೂಲಪ್ಪ, ರಾಜು, ನರಸಿಂಹಪ್ಪ, ಆದಿನಾರಾಯಣಪ್ಪ, ನಾರಾಯಣಪ್ಪ, ಕೆ.ಎನ್.ನರಸಿಂಹಪ್ಪ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net