ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಾಳೆ

Published on

ಕೊಪ್ಪಳ: ಬಾಕಿ ಶೈಕ್ಷಣಿಕ ಸಹಾಯಧನ ಬಿಡುಗಡೆ ಸೇರಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆ.24ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲೂ ಅಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಖಾಸಿಂ ಸರ್ದಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ಸೆಸ್ ಕಾಯ್ದೆ ಸೇರಿ ಕಾರ್ಮಿಕರಿಗೆ ಪೂರಕವಾಗಿರುವ ಇತರ ಕಾಯ್ದೆ ಬಲಪಡಿಸಬೇಕು. ಈಗಿರುವ ಯೋಜನೆಗಳು ಅರ್ಹ ಕಾರ್ಮಿಕರಿಗೆ ಸಿಗಬೇಕು.

ವೇತನ ಚೀಟಿ ಕಡ್ಡಾಯ

ಕಟ್ಟಡ ಕಾರ್ಮಿಕರಿಗೆ ಮಾಸಿಕ ಕನಿಷ್ಠ 26,000ರೂ. ಕನಿಷ್ಠ ವೇತನ ಮತ್ತು ಪಿಂಚಣಿ ಖಾತ್ರಿ ಪಡಿಸಬೇಕು. ಸೆಸ್ ಸೋರಿಕೆ ತಡೆಗಟ್ಟಿ ಸರಿಯಾಗಿ ಸಂಗ್ರಹಿಸಬೇಕು. ಕಾರ್ಮಿಕರಿಗೆ 90 ದಿನಗಳವರೆಗೆ ವೇತನ ಚೀಟಿ ಕಡ್ಡಾಯಗೊಳಿಸಲಾಗಿದೆ.

ಇದರಿಂದ ತೊಂದರೆ ಆಗುತ್ತಿದೆ. ದೊಡ್ಡ ಕಾಮಗಾರಿಗಳಲ್ಲಿ ವರ್ಷಗಟ್ಟಲೆ ಕೆಸಲವಿರುತ್ತದೆ. ಆದರೆ, ಸಣ್ಣ ಕಾಮಗಾರಿಗಳಲ್ಲಿ 90 ದಿನಗಳವರೆಗೆ ಕೆಲಸ ಸಿಗುವುದಿಲ್ಲ. ಜತೆಗೆ ಕಾರ್ಮಿಕರಿಗೆ ನಿರ್ದಿಷ್ಟ ವೇತನ ನಿಗದಿಪಡಿಸದ ಕಾರಣ ಮಾಲೀಕರು ವೇತನ ಚೀಟಿ ನೀಡುವುದಿಲ್ಲ ಎಂದರು.

ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಒದಗಿಸಲಾಗುವ ಶೈಕ್ಷಣಿಕ ಪ್ರೋತ್ಸಾಹಧನ ಈವರೆಗೆ ಬಿಡುಗಡೆಯಾಗಿಲ್ಲ. ತಕ್ಷಣ ಬಿಡುಗಡೆಗೊಳಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆ.24ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು. ಫೆಡರೇಷನ್ ತಾಲೂಕು ಅಧ್ಯಕ್ಷ ಹನುಮೇಶ ಭೋವಿ, ತಾಲೂಕು ಉಪಾಧ್ಯಕ್ಷ ಇಸ್ಮಾಯಿಲ್ ಇಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net