

ಹಿರೀಸಾವೆ: ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಯಿಸರಹಳ್ಳಿ ಗ್ರಾಮದ ಹೊರವಲಯದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಸುಮಾರು 10 ಕುಟುಂಬಗಳು ಸೇರಿದಂತೆ ಒಟ್ಟು 14 ಕುಟುಂಬಗಳು ರಸ್ತೆಯಿಲ್ಲದೆ ದಿನನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 15 ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಗ್ರಾಮದ ಹೊರವಲಯದಲ್ಲಿ ಸುಮಾರು 15 ವರ್ಷಗಳಿಂದ ವಾಸಿಸುತಿದ್ದು ಪ್ರತಿದಿನ ಸಂಚಾರಕ್ಕಿರುವ ರಸ್ತೆ ಕೆಸರು ಗದ್ದೆಯಂತಾಗಿದೆ. ಇದರಿಂದ-ಮಕ್ಕಳು ಶಾಲೆ ಕಾಲೇಜಿಗೆ ತೆರಳಲು, ಜಾನುವಾರುಗಳು ಸಹ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಜನಪ್ರತಿನಿಧಿಗಳು ಚುನಾವಣೆ ವೇಳೆಯಲ್ಲಿ ಮತ ಕೇಳಲು ಮಾತ್ರ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ವಿನಃ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಮಳೆಗಾಲ ಮುಗಿಯುವವರೆಗೂ ಜನತೆ ಕೆಸರುಮಯವಾಗಿರುವ ರಸ್ತೆಯಲ್ಲಿ ತಿರುಗಾಡಬೇಕಿದೆ. ದ್ವಿಚಕ್ರ ಸವಾರರು ಜೀವಭಯದಲ್ಲೇ ಸಂಚರಿಸಬೇಕಿದೆ. ಸುಮಾರು 12-14 ಮನೆಗಳಿದ್ದು, ದಿನನಿತ್ಯ ಕೆಸರು ತುಂಬಿದ ರಸ್ತೆಯಲ್ಲಿಯೇ ಓಡಾಡಬೇಕಿದೆ. ಅಲ್ಲದೆ ನೀರಿನ ತೊಂಬೆಯಿಂದ ಕುಡಿಯುವ ನೀರು ತರಲು ಇದೇ ರಸ್ತೆಯಲ್ಲಿಯೇ ತೆರಳಬೇಕಿದೆ. ಎಲ್ಲಿ ಕಾಲಿಟ್ಟರೂ ಜಾರುವ ಸ್ಥಿತಿ ಇರುವುದರಿಂದ ಅತಂಕದಲ್ಲಿಯೇ ಜೀವನ ನಡೆಸಬೇಕಾದ ಪರಸ್ಥಿತಿ ಎದುರಾಗಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಚನ್ನರಾಯಪಟ್ಟಣ ಉಪವಿಭಾಗ ಕಚೇರಿಗೆ ಕರ್ನಾಟಕ ಸರ್ಕಾರದ ಐಪಿಜಿ ಆರ್.ಎಸ್ ತಂತ್ರಾಂಶದ (ಏಕೀಕೃತ ಸಾರ್ವಜನಿಕ ದೂರು ನಿರ್ವಹಣಾ ತಂತ್ರಾಂಶ) ಮೂಲಕ ಸುಮಾರು 3ಭಾರಿ ಮನವಿಯನ್ನು ಸಲ್ಲಿಸಿದ್ದು, ಅನುದಾನ ಲಭ್ಯವಿಲ್ಲ ಎಂದು ಉತ್ತರ ನೀಡುವ ಮೂಲಕ ಅರ್ಜಿ ವಜಾಗೊಳಿಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡದೆ ಅಧಿಕಾರಿಗಳು ಕುಳಿತ ಜಾಗದಲ್ಲೇ ಅನುದಾನ ಲಭ್ಯವಿಲ್ಲ. ಮಳೆಹಾನಿ ಯೋಜನೆಯಡಿ ಡಿಪಿಆರ್ ತಯಾರಿಸಿದ್ದು, ಅದರಲ್ಲಿ ಸದರಿ ರಸ್ತೆಯನ್ನು ಸೇರಿಸಲಾಗಿದೆ ಅನುಮೋದನೆಯಾದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂಬ ಉತ್ತರ ಮಾತ್ರ ನೀಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಸುಮಾರು ಶೇ.98ರಷ್ಟು ಪರಿಶಿಷ್ಟ ಜಾತಿ ಕುಟುಂಬಗಳೇ ವಾಸವಿದ್ದಾರೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಸಿಪಿ ವಿಶೇಷ ಘಟಕ ಯೋಜನೆಯಡಿ 2021ರಲ್ಲಿ ಕಾಂಕ್ರಿಟ್‌ರಸ್ತೆ ನಿರ್ಮಾಣಕ್ಕೆ ನಾಮಕ ವ್ಯವಸ್ತೆಗೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. 3 ವರ್ಷವಾದರೂ ಅನುದಾನ ಬಿಡುಗಡೆಯಾಗಿಲ್ಲ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಎಸ್‌ಸಿಪಿ ವಿಶೇಷ ಘಟಕ ಯೋಜನೆಯಡಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯ ಮನವಿಯಾಗಿದೆ.