ಜಿಲ್ಲಾ ಪಂಚಾಯಿತಿ ಟಿಕೆಟ್​ಗೆ ಡಿಮಾಂಡ್

2-hvr-01 zp building
Published on

ಹಾವೇರಿ: ಜಿಪಂ ಹಾಗೂ ತಾಪಂ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಕ್ಷೇತ್ರವಾರು ಆಕಾಂಕ್ಷಿಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಸೆ ಚಿಗುರೊಡೆದಿದೆ. ಆಕಾಂಕ್ಷಿಗಳು ಶಾಸಕರು, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಈ ಬಾರಿ ತಮಗೆ ಟಿಕೆಟ್ ಕೊಡಿಸಬೇಕು ಎಂಬ ಬೇಡಿಕೆ ಮಂಡಿಸಲು ಆರಂಭಿಸಿದ್ದಾರೆ.

ಜಿಲ್ಲೆಯ 38 ಜಿಪಂ ಹಾಗೂ 104 ತಾಪಂ ಕ್ಷೇತ್ರಗಳಿಗೆ ಗುರುವಾರ ಚುನಾವಣಾ ಆಯೋಗ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದೆ. ಆಕ್ಷೇಪಣೆಗೆ 8 ದಿನಗಳ ಕಾಲಾವಕಾಶವಿದ್ದರೂ ಬಹುತೇಕ ಕಡೆಗಳಲ್ಲಿ ಮೀಸಲಾತಿ ಬದಲಾವಣೆಯಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಹೀಗಾಗಿ ಈಗ ಬಂದಿರುವ ಮೀಸಲಾತಿಯೇ ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮೀಸಲಾತಿ ಅನ್ವಯಿಸುವ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರ ಮನವೊಲಿಕೆಗೆ ಕಸರತ್ತನ್ನು ಈಗಿನಿಂದಲೇ ಆರಂಭಿಸಿದ್ದಾರೆ.

ಸಾಮಾನ್ಯ ಕ್ಷೇತ್ರಗಳಿಗೆ ಹೆಚ್ಚಿದ ಬೇಡಿಕೆ: ಜಿಲ್ಲೆಯ ಒಟ್ಟು 38 ಜಿಪಂ ಕ್ಷೇತ್ರಗಳಲ್ಲಿ 10 ಕ್ಷೇತ್ರಗಳು ಸಾಮಾನ್ಯ ಮೀಸಲಿವೆ. ಈ ಕ್ಷೇತ್ರಗಳಲ್ಲಿ ಕೈ ಹಾಗೂ ಕಮಲ ಪಕ್ಷದಲ್ಲಿ ಆಕಾಂಕ್ಷಿಗಳ ದಂಡು ಹೆಚ್ಚಾಗಿ ಕಂಡುಬರುತ್ತಿದೆ. ಸಾಮಾನ್ಯ ಮಹಿಳೆಗೆ 8 ಕ್ಷೇತ್ರಗಳು ಮೀಸಲಿದ್ದು, ಇಲ್ಲಿಯೂ ಸ್ವಲ್ಪ ಮಟ್ಟಿನ ಪೈಪೋಟಿ ಹೆಚ್ಚಿದೆ. ಇವರೆಲ್ಲ ಈಗಲೇ ಪಕ್ಷದ ನಾಯಕರಿಗೆ, ‘ನಮಗೆ ಟಿಕೆಟ್ ಕೊಡುವ ಭರವಸೆ ಕೊಟ್ಟರೆ ಈಗಿನಿಂದಲೇ ಚುನಾವಣೆ ಅಖಾಡಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಕೊಟ್ಟರೆ ಮತದಾರರ ಮನವೊಲಿಕೆ ಕಷ್ಟವಾಗಲಿದೆ. ಕನಿಷ್ಠ ನಮಗೆ ಟಿಕೆಟ್ ಕೊಡುವ ಭರವಸೆಯನ್ನಾದರೂ ನೀಡಿ’ ಎಂದು ಪಕ್ಷದ ಜಿಲ್ಲಾ ಹಾಗೂ ತಾಲೂಕು ನಾಯಕರು, ಶಾಸಕರನ್ನು ಒತ್ತಾಯಿಸುತ್ತಿದ್ದಾರೆ. ನಾಯಕರು ಇನ್ನು ಚುನಾವಣೆ ಘೊಷಣೆ ದೂರವಿದೆ. ಕರೊನಾ ಸೋಂಕು ಸಂಪೂರ್ಣ ಹತೋಟಿಗೆ ಬಂದ ನಂತರ ಚುನಾವಣೆ ಘೊಷಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಈಗಲೇ ಯಾವುದೇ ನಿರ್ಧಾರ ಪ್ರಕಟಿಸುವುದು ಸೂಕ್ತವಲ್ಲ. ಚುನಾವಣೆ ಘೊಷಣೆಯಾದ ನಂತರ ಎಲ್ಲರೂ ರ್ಚಚಿಸಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಮಾಧಾನಿಸಿ ಕಳಿಸುತ್ತಿದ್ದಾರೆ.

ನಾಯಕರಿಗೂ ಶುಕ್ರದೆಸೆ: ಜಿಪಂ ಕ್ಷೇತ್ರವಾರು ಐದಾರು ಗ್ರಾಪಂಗಳು ಬರುತ್ತವೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಒಂದಿಷ್ಟು ಉತ್ತಮ ಹೆಸರು ಗಳಿಸಿರುವ ನಾಯಕರು, ಗ್ರಾಪಂ ಸದಸ್ಯರಿಗೆ ಈಗ ಡಿಮಾಂಡ್ ಬಂದಿದ್ದು, ಆಕಾಂಕ್ಷಿಗಳು ಅವರ ಮನೆ ಬಾಗಿಲಿಗೂ ಎಡತಾಕಲು ಆರಂಭಿಸಿದ್ದಾರೆ. ಈ ಬಾರಿ ನಮಗೆ ಟಿಕೆಟ್ ಕೊಡುವಂತೆ ಶಿಫಾರಸು ಮಾಡಿ, ಚುನಾವಣೆ ವೇಳೆ ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ತಾಪಂಗಿಲ್ಲ ಬೇಡಿಕೆ

ತಾಪಂ ಕ್ಷೇತ್ರಗಳ ಜನಸಂಖ್ಯೆ ಮಿತಿ ಈ ಬಾರಿ ಹೆಚ್ಚಳ ಮಾಡಿದ್ದರಿಂದ ಜಿಲ್ಲೆಯ ಒಟ್ಟು ತಾಪಂ ಕ್ಷೇತ್ರಗಳ ಸಂಖ್ಯೆ 124ರಿಂದ 104ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಪಂ, ಗ್ರಾಪಂಗಳಿಗೆ ಹೆಚ್ಚಿನ ಆರ್ಥಿಕ ನೆರವಿದೆ. ಆದರೆ, ತಾಲೂಕು ಪಂಚಾಯಿತಿಗೆ ನೀಡುವ ಅನುದಾನ ಬಹಳ ಕಡಿಮೆಯಿದೆ. ಹೀಗಾಗಿ ತಾಪಂಗೆ ಸ್ಪರ್ಧಿಸಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ತಾಪಂ ಟಿಕೆಟ್ ಕೊಡಿಸಿ ಎಂದು ಯಾರೊಬ್ಬರೂ ಒತ್ತಡ ತರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಹಳಬರಿಗಿಲ್ಲ ಅವಕಾಶ...

ಜಿಲ್ಲೆಯಲ್ಲಿ ಹಿಂದಿನ ಅವಧಿಯಲ್ಲಿ ಜಿಪಂಗೆ ಸ್ಪರ್ಧಿಸಿದ್ದ ಬಹುತೇಕ ಸದಸ್ಯರು ಪುನರಾಯ್ಕೆ ಬಯಸಿದ್ದರು. ಆದರೆ, ಯಾವ ಕ್ಷೇತ್ರಗಳಲ್ಲಿಯೂ ಹಳಬರಿಗೆ ಮರಳಿ ಮೀಸಲಾತಿ ಬಂದಿಲ್ಲ. ಸಾಮಾನ್ಯ ಮೀಸಲಾತಿಯಿರುವ ಕ್ಷೇತ್ರಗಳಲ್ಲಿ ಮಾತ್ರ ಹಳಬರಿಗೆ ಅವಕಾಶವಿದ್ದು, ಅಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರದ ಮೇಲೆ ಅವರ ಭವಿಷ್ಯ ಅವಲಂಬಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net