

ಹನೂರು: ತಾಲೂಕಿನ ಒಡೆಯರಪಾಳ್ಯ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿನ ಚರಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ರಸ್ತೆಯು ಗ್ರಾಮದ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಇದರ ಬದಿಯಲ್ಲಿ ಹಲವು ದಶಕಗಳ ಹಿಂದೆ ಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಆಡಳಿತ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಚರಂಡಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ಕಾಲಕಾಲಕ್ಕೆ ವಿಲೇವಾರಿಗೊಳಿಸುವಲ್ಲಿ ಗ್ರಾ.ಪಂ. ನಿರ್ಲಕ್ಷೃ ವಹಿಸಿದ್ದು, ಇದರಿಂದ ಚರಂಡಿಯಲ್ಲಿ ಹೂಳು ತುಂಬುತ್ತಿದ್ದು, ಅನೈರ್ಮಲ್ಯ ಮನೆ ಮಾಡಿದೆ.
ಇದರಿಂದ ರಾತ್ರಿ ಸೊಳ್ಳೆಗಳ ಕಾಟ ಅನುಭವಿಸುವಂತಾಗಿದೆ. ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ. ಮಳೆ ಬಂದರೆ ಚರಂಡಿಯ ನೀರು ಆಸುಪಾಸಿನ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.
ಚರಂಡಿಯಲ್ಲಿನ ಹೂಳನ್ನು ತೆರವುಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚರಂಡಿಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗ್ರಾಮದ ಜಡೇರುದ್ರಸ್ವಾಮಿ ಒತ್ತಾಯಿಸಿದ್ದಾರೆ.