

ಗುಂಡ್ಲುಪೇಟೆ: ಸಾರ್ವಜನಿಕರ ಯಾವುದೇ ಕೆಲಸ ಮಾಡಿಕೊಡದೆ ಲಕ್ಷಾಂತರ ರೂ.ದುರುಪಯೋಗಪಡಿಸಿಕೊಂಡಿರುವ ಪಿಡಿಒ ಅಮಾನತಿಗೆ ಒತ್ತಾಯಿಸಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಕುಂದುಕೊರತೆ ಸಭೆಗೆ ಅಡ್ಡಿಪಡಿಸಿದ ಪ್ರಸಂಗ ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕಿನ ಶಿಂಡನಪುರ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ಕುಂದುಕೊರತೆಗಳ ಸಭೆಗೆ ಹಿರಿಯ ಅಧಿಕಾರಿಗಳ ಗೈರಿನಿಂದ ಬೇಸತ್ತ ಗ್ರಾಮಸ್ಥರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರನ್ನು ಸಭೆ ನಡೆಸದಂತೆ ಅಡ್ಡಿಪಡಿಸಿದರು.
ಕೆಲಸೀಪುರ ಗ್ರಾಮದ ಮಹಿಳೆಯೊಬ್ಬರು ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿಯವರು ಇನ್ನೂ ಮಾಡಿಕೊಟ್ಟಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಪಿಡಿಒ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಹಿರಿಯ ಅಧಿಕಾರಿ ಬರುತ್ತಾರೆ ಎಂದು ಸಭೆಗೆ ಬಂದರೆ ಅವರೇ ಬಾರದೆ ಪಿಡಿಒ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಚಣ್ಣ, ಸದಸ್ಯ ಎಸ್.ಟಿ.ಮಹದೇವಸ್ವಾಮಿ ಮತ್ತು ಸಾರ್ವಜನಿಕರು, ಕಳೆದ ಎಂಟು ತಿಂಗಳಿನಿಂದಲೂ ಪಿಡಿಒ ಇ-ಸ್ವತ್ತು ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ. ಸದಸ್ಯರು ಹಾಗೂ ಅಧ್ಯಕ್ಷರ ಗಮನಕ್ಕೆ ತರದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸದೆ ಸುಮಾರು 15 ಲಕ್ಷಕ್ಕೂ ಹೆಚ್ಚಿನ ಹಣ ದುರುಪಯೋಗ ಮಾಡಿಕೊಂಡು ನಕಲಿ ಬಿಲ್ ಹಾಗೂ ಎರಡು ನಡಾವಳಿಗಳನ್ನು ಸೃಷ್ಟಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ದೊಡ್ಡತುಪ್ಪೂರು ಗ್ರಾಮದಲ್ಲಿ ಕಳಪೆ ದರ್ಜೆಯ ಕೂಸಿನ ಮನೆ ನಿರ್ಮಿಸಿ ಸ್ವತಃ ಉದ್ಘಾಟಿಸಲು ಮುಂದಾಗಿದ್ದರು. ಈ ಬಗ್ಗೆ ಎಚ್ಚ್ಚೆತ್ತ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಉದ್ಘಾಟನೆ ಕೈಬಿಟ್ಟಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇಂದು ಸಿಇಒ ಅವರೇ ಬರುತ್ತಾರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂಬ ನಿರೀಕ್ಷೆಯಿಂದ ಜನರು ಆಗಮಿಸಿದ್ದರೂ ಗೈರಾಗಿದ್ದಾರೆ. ಆದ್ದರಿಂದ ಸಿಇಒ ಅವರೇ ಖುದ್ದಾಗಿ ಆಗಮಿಸಿ ಸಭೆ ನಡೆಸುವ ಜತೆಗೆ ಅಕ್ರಮದಲ್ಲಿ ಪಾಲ್ಗೊಂಡಿರುವ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಪಿಡಿಒ ವಿಜಯಾ ವಿರುದ್ಧ ಘೋಷಣೆ ಕೂಗಿ ಸಭೆಗೆ ಅಡ್ಡಿಪಡಿಸಿದರು.
ನಂತರ ಆಗಮಿಸಿದ ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಯಿತು. ನಂತರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಹೋಗಬೇಕಾಗಿದ್ದರಿಂದ ಜಿಪಂ ಸಿಇಒ ಸಭೆಗೆ ಬರಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಹಾಗೂ ಸಾರ್ವಜನಿಕರು ನೀಡಿದ ದೂರಿನ ಬಗ್ಗೆ ತನಿಖೆ ನಡೆಸಿ ಜಿಲ್ಲಾ ಪಂಚಾಯಿತಿಗೆ ನೀಡಲಾಗಿದೆ. ಮತ್ತೆ ಯಾವುದಾರೂ ದೂರುಗಳಿದ್ದರೆ ಅವುಗಳ ಬಗ್ಗೆಯೂ ತನಿಖೆ ನಡೆಸಿ ಸರ್ಕಾರದ ಹಣ ದುರುಪಯೋಗ ತಡೆಗಟ್ಟಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಸಭೆ ರದ್ದುಗೊಳಿಸಿದರು.