ಏಮ್ಸ್ ಬೇಡಿಕೆ ಮರುಜೀವ : ಕಾಸರಗೋಡಿನಲ್ಲಿ ಸ್ಥಾಪಿಸಲು ಎರಡು ದಶಕಗಳಿಂದ ಒತ್ತಾಯ : ಹೋರಾಟಕ್ಕೆ ಸಿದ್ಧಗೊಂಡ ಸಂಘಟನೆಗಳು

aims
ಕಾಸರಗೋಡು ಜಿಲ್ಲೆಯ ಉಕ್ಕಿನಡ್ಕದಲ್ಲಿ ದಶಕಕ್ಕೂ ಹಿಂದೆ ಶಿಲಾನ್ಯಾಸಗೊಂಡಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ.
Published on

ಪುರುಷೋತ್ತಮ ಪೆರ್ಲ, ಕಾಸರಗೋಡು

ಜಿಲ್ಲೆಗೆ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ(ಎಐಐಎಂಎಸ್) ಮಂಜೂರುಗೊಳಿಸುವ ಬಗ್ಗೆ ಜನತೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ನೂತನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಕುರಿತು ಘೋಷಣೆಯಾಗುವ ನಿರೀಕ್ಷೆ ಇಟ್ಟುಕೊಂಡಿರುವ ಜಿಲ್ಲೆಯ ಜನತೆಯಿಂದ ಏಮ್ಸ್ ಸ್ಥಾಪನೆಗೆ ಒಕ್ಕೊರಲಿನ ಕೂಗು ವ್ಯಕ್ತವಾಗುತ್ತಿದೆ.

ಅತ್ಯಂತ ಹಿಂದುಳಿದ ಹಾಗೂ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಲ್ಲದ ಕಾಸರಗೋಡು ಜಿಲ್ಲೆಗೆ ಏಮ್ಸ್ ಮಂಜೂರುಗೊಳಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಏಮ್ಸ್ ಮಂಜೂರಾತಿಗೆ ಕಾಸರಗೋಡು ಅತ್ಯಂತ ಸೂಕ್ತ ಜಿಲ್ಲೆ ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ. ಎಂಡೋಸಲ್ಫಾನ್‌ನಿಂದ ಉಂಟಾದ ಆನುವಂಶಿಕ ನ್ಯೂನ್ಯತೆಗಳೊಂದಿಗೆ ಜನಿಸುತ್ತಿರುವ ಮಕ್ಕಳು ಮತ್ತು ಪಾಲಕರು ಜೀವನಪೂರ್ತಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಪೆರಿಯದಲ್ಲಿ ಚಟುವಟಿಕೆ ನಡೆಸುತ್ತಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಅಧೀನದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸುವ ಬಗ್ಗೆ ಪ್ರಸ್ತಾವನೆಯಿದ್ದರೂ, ಇದುವರೆಗೆ ಆರಂಭಿಕ ಚಟುವಟಿಕೆಯೂ ನಡೆದಿಲ್ಲ. ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ಉನ್ನತ ಚಿಕಿತ್ಸೆ ಲಭ್ಯವಾಗಬೇಕಾದರೆ ಏಮ್ಸ್ ಮಂಜೂರಾತಿ ಅನಿವಾರ್ಯ.

ಗರಿಗೆದರಿದ ಬೇಡಿಕೆ

ಏಮ್ಸ್ ಕಾಸರಗೋಡಿಗೆ ಮಂಜೂರುಗೊಳಿಸುವಂತೆ ಜಿಲ್ಲೆಯಲ್ಲಿ ಜನಪರ ಒಕ್ಕೂಟ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಲೇ ಬರುತ್ತಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಕೇರಳದಿಂದ ಇಬ್ಬರು ಸಹಾಯಕ ಸಚಿವರು ಸ್ಥಾನಪಡೆದುಕೊಳ್ಳುತ್ತಿದ್ದಂತೆ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ತೃಶ್ಯೂರ್ ಸಂಸದ ಸುರೇಶ್‌ಗೋಪಿ ಕಾಸರಗೋಡಿನ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಬಗ್ಗೆ ಹಿಂದಿನಿಂದಲೂ ಹೆಚ್ಚಿನ ಕಾಳಜಿ ವಹಿಸಿದ್ದು, ಕಾಸರಗೋಡಿಗೆ ಏಮ್ಸ್ ಲಭ್ಯವಾಗಿಸುವಲ್ಲಿ ಇವರ ಪಾತ್ರ ಪ್ರಮುಖವಾಗಲಿದೆ ಎಂಬುದು ಕಾಸರಗೊಡಿನ ಜನತೆಯ ಆಶಯವಾಗಿದೆ.

ಪ್ರಸ್ತಾವನೆಯಲ್ಲಿ ಕಾಸರಗೋಡು ಹೆಸರಿಲ್ಲ

ಜಿಲ್ಲೆಗೆ 2013ರಲ್ಲಿ ಮಂಜೂರಾಗಿ ಲಭಿಸಿದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಇನ್ನೂ ತಲೆಯೆತ್ತಿಲ್ಲ. ಕೇರಳಕ್ಕೆ ಏಮ್ಸ್ ಮಂಜೂರಾಗಬೇಕಾದರೆ ಕೇರಳ ಸರ್ಕಾರ ಕಾಸರಗೋಡಿನ ಹೆಸರನ್ನು ಪ್ರಸ್ತಾವನೆಯಲ್ಲಿ ಸಲ್ಲಿಸಬೇಕು. ಆದರೆ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರು ಉಲ್ಲೇಖಿಸದಿರುವುದು ವಿಪರ್ಯಾಸ. ಕಾಸರಗೋಡಿನ ಹೆಸರನ್ನು ಪ್ರಸ್ತಾವನೆಯಲ್ಲಿ ಸೇರಿಸಲು ಸಂಸದ, ಶಾಸಕರು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಏಮ್ಸ್ ಕಾಸರಗೋಡು ಜಿಲ್ಲೆಗೆ ಮಂಜೂರಾಗಿ ಲಭಿಸುವ ಎಲ್ಲ ಅರ್ಹತೆಯಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ಹೆಸರು ಪ್ರಸ್ತಾವನೆಯಲ್ಲಿ ಒಳಪಡಿಸುವುದೂ ಸಾಧ್ಯವಾಗಿಲ್ಲ.

ಏಮ್ಸ್ ವಿಚಾರವಾಗಿ ಕಾಸರಗೋಡು ಜನಕೀಯ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ ಇದುವರೆಗಿನ ಹೋರಾಟಗಳ ಮುಂದುವರಿದ ಭಾಗವಾಗಿ ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ಒಟ್ಟು ಸೇರಿಸಿ ಬೃಹತ್ ಆಂದೋಲನ ಹಮ್ಮಿಕೊಳ್ಳಲು ಸಂಘ ನಿರ್ಧರಿಸಿದೆ. ಏಮ್ಸ್ ವಿಚಾರದಲ್ಲಿ ಜನಪ್ರತಿನಿಧಿಗಳು ಜನರನ್ನು ತಪ್ಪು ದಾರಿಗೆ ಎಳೆಯಬಾರದು. ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಒಟ್ಟಾಗಿ ಸಿಎಂ ಮೇಲೆ ಒತ್ತಡ ಹಾಕಿ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರನ್ನು ಸೇರ್ಪಡೆಗೊಳಿಸಬೇಕು. - ಗಣೇಶ್ ಅರಮಂಗಾನಂ, ಅಧ್ಯಕ್ಷ, ಕಾಸರಗೋಡು ಜನಪರ ಒಕ್ಕೂಟ ಕೇಂದ್ರವು ಕೇರಳಕ್ಕೆ ಮಂಜೂರು ಮಾಡುವ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಪ್ರಬಲ ಹೋರಾಟಕ್ಕೆ ಮುಂದಾಗಲಿದೆ. ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹಾಗೂ ಜಿಲ್ಲೆಯ ಆರೋಗ್ಯ ಕ್ಷೇತ್ರದ ಹಿನ್ನಡೆ ನಿವಾರಿಸಲು ಕಾಸರಗೋಡಿನಲ್ಲಿ ಏಮ್ಸ್ ಆಸ್ಪತ್ರೆ ಅತ್ಯಗತ್ಯ. ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಶ್ರಮಿಸುತ್ತಿರುವ ಪೀಪಲ್ಸ್ ಅಸೋಸಿಯೇಷನ್‌ಗೆ ಬಿಜೆಪಿ ಬೆಂಬಲವಿದೆ. - ರವೀಶ್ ತಂತ್ರಿ ಕುಂಟಾರು, ಅಧ್ಯಕ್ಷ, ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net