ಪರಿಹಾರ ಬಿಡುಗಡೆಗೆ ಆಗ್ರಹಿಸಿ ಧರಣಿ

7HNL1
Published on

ಹಾನಗಲ್ಲ: ಮಾವು ಬೆಳೆ ವಿಮೆ ಪರಿಹಾರ ಬಿಡುಗಡೆ, ನಿರಂತರ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ರೈತರು ಸೋಮವಾರ ಧರಣಿ ನಡೆಸಿದರು.

ಪಟ್ಟಣದ ಕುಮಾರೇಶ್ವರ ಮಠದಿಂದ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, 2020-21ರಲ್ಲಿ ಮಾವು ಬೆಳೆ ವಿಮೆ ಕಂತು ಕಟ್ಟಿದ್ದರೂ ಇದುವರೆಗೆ ಪರಿಹಾರ ಘೊಷಣೆಯಾಗಿಲ್ಲ. ಅಡಕೆ, ಶುಂಠಿ ಬೆಳೆಗೆ ವಿಮೆ ಕಂತು ಕಟ್ಟಲಾಗಿದ್ದು, ದಾಖಲೆಗಳು ಹೊಂದಾಣಿಕೆಯಾಗದ್ದರಿಂದ ಪರಿಹಾರ ನೀಡಿಲ್ಲ. ಬೇಸಿಗೆ ಅವಧಿಯ ಬೆಳೆಗಳಿಗೆ ಹೆಸ್ಕಾಂ ಹಗಲು ವೇಳೆಯಲ್ಲಿ 12 ತಾಸು ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಓವರ್​ಲೋಡ್ ಆಗಿರುವ ಟಿಸಿ ಬದಲಾಯಿಸಬೇಕು. ಶಿಥಿಲಗೊಂಡ ಕಂಬ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

2018-19ರಲ್ಲಿ ಗ್ರಾಮಲೆಕ್ಕಾಧಿಕಾರಿಗಳ ತಪ್ಪಿನಿಂದಾದ ಪ್ರಕರಣದಲ್ಲಿ ಇನ್ನೂ 6 ಸಾವಿರ ರೈತರಿಗೆ ಅತಿವೃಷ್ಟಿ ಪರಿಹಾರ ದೊರೆತಿಲ್ಲ. ತನಿಖೆ ಬದಿಗಿಟ್ಟು ಪರಿಹಾರ ವಿತರಿಸಬೇಕು. ಅದೇ ವರ್ಷದ ಮಳೆಯಿಂದಾಗಿ ಭೂಮಿ ಕೊರಕಲಿನ 375 ರೈತರ ಪ್ರಕರಣಗಳಿಗೆ ಕೂಡಲೆ ಪರಿಹಾರ ಬಿಡುಗಡೆಗೊಳಿಸಬೇಕು. ಧರ್ವ ಕಾಲುವೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಎಲ್ಲ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರೈತರ ಎಲ್ಲ ಸಮಸ್ಯೆಗಳು ಹಾಗೂ ಪರಿಹಾರ ಬಿಡುಗಡೆಗೆ ಒಂದು ತಿಂಗಳ ಕಾಲಾವಕಾಶ ನೀಡೋಣ ಎಂದರು.

ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಮಟ್ಟದ ಪದಾಧಿಕಾರಿಗಳಾದ ಮಹೇಶ ವಿರುಪಣ್ಣನವರ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಮಲ್ಲೇಶಪ್ಪ ಪರಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ನಂದಿಶೆಟ್ಟರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net