ಪಿಡಿಒ ವರ್ಗಾವಣೆಗೆ ಆಗ್ರಹ

IMG-20250213-WA0016
ಮೂಗೂರು ಪಿಡಿಒ ಪ್ರಕಾಶ್ ಅವರನ್ನು ವರ್ಗಾವನೆ ಮಾಡುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್ ಹಾಗೂ ಸದಸ್ಯರು ಇತ್ತೀಚೆಗೆ ಜಿಪಂ ಸಿಇಒ ಗಾಯತ್ರಿ ಅವರಿಗೆ ಮೈಸೂರಿನ ಜಿಪಂ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಶಿವಣ್ಣ, ಮನು, ಚೇತನ್ ಇತರರು ಇದ್ದರು.
Published on

ಮೂಗೂರು: ಇಲ್ಲಿನ ಪಿಡಿಒ ಪ್ರಕಾಶ್ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡಿರುವ ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್ ಹಾಗೂ ಸದಸ್ಯರು ಪಿಡಿಒ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಅವರಿಗೆ ಮನವಿ ಸಲ್ಲಿಸಿದರು.

ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರ ಜತೆ ಪಿಡಿಒ ಪ್ರಕಾಶ್ ಸರಿಯಾಗಿ ವರ್ತಿಸುತ್ತಿಲ್ಲ. ಅಲ್ಲದೆ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸ್ಪಂದಿಸದ ಕಾರಣ ಎಲ್ಲವೂ ವಿಳಂಬವಾಗುತ್ತಿದೆ. ಪ್ರಕಾಶ್ ಅವರು ಅನನುಭವಿಯಾಗಿದ್ದು, ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಇವರನ್ನು ವರ್ಗಾವಣೆ ಮಾಡಿ, ಉತ್ತಮ ಅಧಿಕಾರಿಯನ್ನು ನಿಯೋಜಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ.ಲೋಕೇಶ್ ಮಾತನಾಡಿ, ಪ್ರಭಾವಿಗಳ ಶಿಫಾರಸಿನ ಮೇಲೆ ಇಲ್ಲಿಗೆ ವರ್ಗವಾಗಿ ಬಂದಿರುವ ಪಿಡಿಒ ಪ್ರಕಾಶ್ ಪಂಚಾಯಿತಿ ಸದಸ್ಯರಿಗೆ ಗೌರವ ನೀಡದೆ ಅಸಡ್ಡೆಯಿಂದ ಕಾಣುತ್ತಿದ್ದಾರೆ. ಪಿಡಿಒ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೂ ಹಾಗೂ ತಾಪಂ ಇಒ ಅವರಿಗೂ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇವರ ವಿರುದ್ಧ ಕ್ರಮ ವಹಿಸಲು ಮೀನಮೇಷ ಎಣಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕಾದ ಪಿಡಿಒ ಪ್ರಕಾಶ್ ಪಂಚಾಯಿತಿ ಅಭಿವೃದ್ಧಿಗೆ ಶಾಪವಾಗಿದ್ದಾರೆ ಎಂದು ಆರೋಪಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಮನು, ಚೇತನ್, ಜಿಪಿ ಪುಟ್ಟಮಾದಯ್ಯ, ಮುಖಂಡರಾದ ಶಾಂತನಾಗರಾಜು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net