ಮಾಗಡಿ ಸೊಗವರೆಗೆ ಡಿಮಾಂಡ್!

magadi sogavare
Published on

* ಮುಂದಿನ ತಲೆಮಾರಿಗೆ ಅವರೆ ಕಾಯಿ ಪರಿಚಯಿಸುವ ಸಲುವಾಗಿ ಆಯೋಜಿಸಿರುವ ಅವರೆ ಮೇಳ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಮಾಗಡಿ ಸೊಗಡಿನ ಅವರೆಕಾಯಿಗೆ ಎಲ್ಲೆಡೆ ಹೆಚ್ಚು ಬೇಡಿಕೆ ಉಂಟಾಗಿದೆ. ಚಳಿಗಾಲದಲ್ಲಿ ಬೆಳೆಯುವ ಮಾಗಡಿ ಅವರೆ ಕಾಯಿಗೆ ಬೆಂಗಳೂರು, ತುಮಕೂರು, ರಾಮನಗರ, ಹಾಸನಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಹೆಚ್ಚು ಬೆಲೆಯಾದರೂ ಬೇಡಿಕೆ ಮಾತ್ರ ತಗ್ಗಿಲ್ಲ.

ಆದರೆ, ತಾಲೂಕಿನಾದ್ಯಂತ ಪ್ರತಿವರ್ಷ ಸೊಗಡಿನ ಅವರೆಕಾಯಿ ಬೆಳೆಯುವವರು ಕಡಿಮೆಯಾಗುತ್ತಿದೆ. ಪೂರ್ವಿಕರ ಕಾಲದಿಂದಲೂ ಹೆಚ್ಚಾಗಿ ಅವರೆ ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ರಾಗಿ ಬೆಳೆ ಹೆಚ್ಚಾಗಿ ಅವರೆಕಾಯಿ ಬೆಲೆ ಗಗನಕ್ಕೆ ಏರಿದೆ.

ತಾಲೂಕಿನಲ್ಲಿ ಚಿನಿಗಲ ಅವರೆ, ದೆಬ್ಬೆ ಅವರೆ ಬೆಳೆದು ನಂತರ ಗದ್ದೆ ಬಯಲಿನಲ್ಲಿ ರೈತರು ಮೂರು ತಿಂಗಳ ಅವರೆ ಬೆಳೆಯುವುದು ವಾಡಿಕೆ. ನವೆಂಬರ್, ಡಿಸೆಂಬರ್‌ನಿಂದ ಜ.15ರವರೆಗೆ ಸೊಗಡಿನ ಅವರೆ ಕಾಯಿ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಆದರೆ, ಈ ಬಾರಿ ಮಾಗಡಿ ಸೊಗಡಿನ ಅವರೆಕಾಯಿ ಕಡಿಮೆಯಿಂದಾಗಿ ಹುಣಸೂರು, ತಮಿಳುನಾಡಿನ ಅವರೆ ಮಾಗಡಿಗೆ ಲಗ್ಗೆ ಇಟ್ಟಿದೆ.

ಗ್ರಾಹಕರಿಗೆ ಮೋಸ:

ಮಾಗಡಿ ಸೊಗಡಿನ ಅವರೆಗೆ ಇತರ ಅವರೆಕಾಯಿ ಬೆರಸಿ, ಮಾಗಡಿ ಸೊಗಡಿನ ಅವರೆ ಎಂದು ಗ್ರಾಹಕರಿಗೆ ಮೋಸಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಮಾಗಡಿ ಸೊಗಡಿನ ಅವರೆಕಾಯಿಯ ವೈಶಿಷ್ಟ್ಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಗಡಿ ಸೊಗಡಿನ ಅವರೆಕಾಯಿಯ ಪ್ರತಿ ಕೆಜಿಗೆ 60ರಿಂದ 70 ರೂ.ಇದ್ದರೆ, ಹುಣಸೂರು, ಕೋಲಾರ, ತಮಿಳುನಾಡಿನ ಅವರೆ ಕಾಯಿಯ ಪ್ರತಿ ಕೆಜಿಗೆ 30ರಿಂದ 35 ರೂ. ಇದೆ. ಪಟ್ಟಣದ ಕಲ್ಯಾಗೇಟ್, ಕೆಂಪೇಗೌಡ ವೃತ್ತ, ಹೊಸಪೇಟೆ ವೃತ್ತ ಹಾಗೂ ಗುಡೇಮಾರನಹಳ್ಳಿ ರಸ್ತೆಯ ಬದಿ ಮತ್ತು ಕಾಳಾರಿ ಕಾವಲ್-ಮರೂರು ಹ್ಯಾಂಡ್ ಪೋಸ್ಟ್ ರಸ್ತೆ ಬದಿಗಳಲ್ಲಿ ಅವರೆಕಾಯಿ ಮಾರಾಟ ಜೋರಾಗಿದೆ. ಮಾಗಡಿ ಸೊಗಡಿನ ಅವರೆ ಕಾಯಿಗೆ ಬೆಂಗಳೂರಿನಲ್ಲಿ ಕೆಜಿಗೆ 100 ರೂ.ವರೆಗೆ ಇದೆ. ಹಿತಿಕಿದ ಅವರೆಗೆ ಕೆಜಿ 350 ರಿಂದ 400 ರೂ.ವರೆಗೆ ಮಾರಾಟವಾಗುತ್ತಿದೆ.

ಅವರೆಕಾಯಿ ಮೇಳ

ಬೆಂಗಳೂರಿನ ಕಾಂಡಿಮೆಂಟ್ಸ್‌ವೊಂದು 25 ವರ್ಷದ ಹಿಂದೆ ಆರಂಭಿಸಿದ ಅವರೆಕಾಯಿ ಮೇಳಕ್ಕೆ 25 ವರ್ಷ ಸಂದ ಕಾರಣ ಈ ಬಾರಿಯ ಮೇಳ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.27ರಿಂದ ಆರಂ‘ವಾಗಿದ್ದು, ಜ.5ರ ವರೆಗೆ ನಡೆಯಲಿದೆ.

ಸ್ವಾತಿ, ಅವರೆ ಮೇಳ ಆಯೋಜಕಿ

ಮಾಗಡಿ ಸೊಗಡಿನ ಅವರೆ ಕಾಯಿ ಪರಿಮಳ, ರುಚಿ ಬೇರೆ ಯಾವ ಅವರೆಯಿಂದಲೂ ಸಿಗುವುದಿಲ್ಲ. ಈ ಬಾರಿ ಮಾಗಡಿ ಸೊಗಡಿನ ಅವರೆ ಕಾಯಿ ಕಡಿಮೆಯಾಗಿದ್ದು, ಹುಣಸೂರು, ಕೋಲಾರದ ಅವರೆ ಹೆಚ್ಚಾಗಿದೆ. ಮಾಗಡಿ ಸೊಗಡಿನ ಅವರೆಕಾಯಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚು ಅವರೆಕಾಯಿ ಬೆಳೆಯುವ ರೈತರನ್ನು ಸನ್ಮಾನಿಸಲಾಗುವುದು.

ಮಾಗಡಿ ಅವರೆಕಾಯಿ ಸೊಗಡು ಎಲ್ಲೆಲ್ಲೂ ಪಸರಿಸಿದೆ. ರೈತರು ಈ ಅವರೆಕಾಯಿ ಬೆಳೆಯಲು ಮುಂದಾಗಬೇಕು. ಸರ್ಕಾರ ಮುಂದಿನ ದಿನಗಳಲ್ಲಿ ಅವರೆಕಾಯಿಗೆ ಬೆಂಬಲ ಬೆಲೆಯಾಗಿ ಕ್ವಿಂಟಾಲ್‌ಗೆ 10 ಸಾವಿರ ರೂ. ಘೋಷಿಸಿದರೆ ರೈತರು ಮತಷ್ಟು ಬೆಳೆಯಲು ಉತ್ಸುಕರಾಗುತ್ತಾರೆ. ಲೋಕೇಶ್ ತಾಲೂಕು ರೈತಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net