

ವಿಜಯವಾಯಿ ಸುದ್ದಿಜಾಲ ಹಳೆಯಂಗಡಿ
ಹಳೆಯಂಗಡಿಯ ಸಾರ್ವಜನಿಕ ಗ್ರಂಥಾಲಯ ಸಂಪೂರ್ಣ ಶಿಥಿಲಗೊಂಡು ಮಳೆಗೆ ಸೋರುತ್ತಿದ್ದು ಕುಸಿಯುವ ಸ್ಥಿತಿಯಲ್ಲಿದೆ.
ಮಳೆಗೆ ಸೋರುವುದನ್ನು ತಪ್ಪಿಸಲು ಕಟ್ಟಡದ ಮೇಲ್ಭಾಗದಲ್ಲಿ ತಾತ್ಕಾಲಿಕವಾಗಿ ಟಾರ್ಪಾಲ್ ಶೀಟ್ ಅಳವಡಿಸಿ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಸಾರ್ವಜನಿಕ ಗ್ರಂಥಾಲಯವಿದ್ದರೂ ಪಂಚಾಯಿತಿ ಪ್ರತಿನಿಧಿಗಳು ಕೇಂದ್ರ ಗ್ರಂಥಾಲಯಕ್ಕೆ ಮನವಿ ನೀಡುವ ಮನಸ್ಸು ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಡದ ಒಳಭಾಗದ ಮೇಲ್ಭಾಗದಲ್ಲಿ ಹಳೆಯ ಕಾಲದ ಮರಗಳಿಗೆ ಗೆದ್ದಲು ಕಾಟ ಉಂಟಾಗಿದ್ದು, ಅಮೂಲ್ಯ ಪುಸ್ತಕಗಳು ಹಾಳಾಗುವ ಸಮಸ್ಯೆ ಎದುರಿಸುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಸಮಯ ಶಾಸಕ ಉಮಾನಾಥ ಕೋಟ್ಯಾನ್ ಅವರು ನೂತನ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಕ್ರೋಡೀಕರಿಸಿದ್ದರೂ ಸರ್ಕಾರದ ಬದಲಾವಣೆಯಿಂದ ಕಾಮಗಾರಿಗಳಿಗೆ ತಡೆ ಉಂಟಾಗಿದೆ.
ಈ ಕಟ್ಟಡದಲ್ಲಿ ಬಾಪೂಜಿ ಸೇವಾ ಕೇಂದ್ರ ಕೂಡ ಇದ್ದು ಇಲ್ಲಿಗೆ ವಿವಿಧ ಅರ್ಜಿ ಹಾಗೂ ಆರ್.ಟಿ.ಸಿ.ಗಾಗಿ ಬರುವ ಸಾರ್ವಜನಿಕರ ನಿಭಿಡತೆ ಇದೆ. ಗ್ರಂಥಾಲಯದ ಹಿಂಭಾಗದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಶೌಚ ಮಾಡುತ್ತಿದ್ದು, ಗ್ರಂಥಾಲಯಕ್ಕೆ ಪುಸ್ತಕ ಓದಲು ಬರುವವರಿಗೆ ದುರ್ವಾಸನೆಯುಕ್ತ ವಾತಾವರಣ ಹಾಗೂ ರೋಗದ ಭೀತಿ ಎದುರಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಗ್ರಂಥಾಲಯದ ಕಟ್ಟಡವನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಲು ಪಂಚಾಯಿತಿ ಆಡಳಿತ ಮುಂದಾಗಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಹಳೆಯಂಗಡಿ ಗ್ರಂಥಾಲಯವು ಸ್ಥಳೀಯ ಓದುಗರು ಮಾತ್ರವಲ್ಲದೆ ವಿದ್ಯಾರ್ಥಿಗಳ ಓದಿಗೆ ಬಹಳ ಸಹಕಾರಿಯಾಗಿದೆ. ಶೀಘ್ರ ಮೂಲಸೌಕರ್ಯಗಳನ್ನು ಒದಗಿಸಬೇಕು. - ಶಶಿಕಾಂತ ಪ್ರಭು ಹಳೆಯಂಗಡಿ ಅಮೃತ ಗ್ರಾಮ ಯೋಜನೆಯಲ್ಲಿ 5 ಲಕ್ಷ ರೂ. ಮಂಜೂರು ಆಗಿದ್ದು, ಹೆಚ್ಚುವರಿ ಅನುದಾನಕ್ಕೆ ಪ್ರಯತ್ನ ನಡೆದಿದೆ. ಕಟ್ಟಡದ ಹಿಂದೆ ಕಾಲುದಾರಿ ಇರುವ ಕಾರಣ ಶೌಚ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಪಂಚಾಯಿತಿ ವತಿಯಿಂದ ಅನುದಾನ ಕ್ರೋಡೀಕರಿಸಿ ಮಳೆಗಾಲದ ನಂತರ ಕಾಮಗಾರಿ ಯೋಜನೆ ಪ್ರಾರಂಭಿಸಲಾಗುವುದು. - ಪೂರ್ಣಿಮಾ, ಅಧ್ಯಕ್ಷರು, ಹಳೆಯಂಗಡಿ ಗ್ರಾಮ ಪಂಚಾಯಿತಿ