ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 92ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ ಕಲ್ಲಡ್ಕ ಪೇಟೆಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಸೋಮವಾರ ಬೆಳಗ್ಗೆ ಧ್ವಜಾರೋಹಣ, ಸ್ಪರ್ಧೆಗಳು, ತಾಳಮದ್ದಳೆ, ರಾತ್ರಿ ಭಜನೆ ನಡೆಯಿತು. ಮಂಗಳವಾರ ಮಧ್ಯಾಹ್ನ ಭಜನೆ ಬಳಿಕ ಶ್ರೀಕೃಷ್ಣ ದೇವರ ಶೋಭಾಯಾತ್ರೆ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಶ್ರೀಕೃಷ್ಣ ಲೋಕ ಗಮನ ಸೆಳೆಯಿತು. ಧಾರ್ಮಿಕ ಸಭೆಯಲ್ಲಿ ಬಂಟ್ವಾಳ ವಿಹಿಂಪ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಉಪನ್ಯಾಸ ನೀಡಿದರು.
ಬಳಿಕ ಶ್ರೀಕೃಷ್ಣ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಶ್ರೀರಾಮ ವಿದ್ಯಾಕೇಂದ್ರದ ಬಳಿಯಿಂದ ವೈಭವದ ಶೋಭಾಯಾತ್ರೆ ಪೇಟೆಯಲ್ಲಿ ಸಾಗಿ ಬಳಿಕ ಮತ್ತೆ ಶ್ರೀರಾಮ ಮಂದಿರಕ್ಕೆ ಸಾಗಿತು.
ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು, ನಾಸಿಕ್ ಬ್ಯಾಂಡ್, ಭಜನಾ ತಂಡಗಳು, ಶ್ರೀಕೃಷ್ಣ ವೇಷಧಾರಿ ಮಕ್ಕಳು, ತಾಲೀಮು ತಂಡಗಳು, ಪಿರಮಿಡ್ ರಚಿಸಿ ಮೊಸರು ಕುಡಿಕೆ ಒಡೆಯುವ ದೃಶ್ಯಗಳು ಗಮನ ಸೆಳೆದವು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಮಂಡಳಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಆರ್.ಚೆನ್ನಪ್ಪ ಆರ್.ಕೋಟ್ಯಾನ್, ಕಾರ್ಯದರ್ಶಿ ಕೃಷ್ಣಪ್ಪ, ಉತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಗಾರ್, ಕಾರ್ಯದರ್ಶಿ ಸುಜಿತ್ ಕೊಟ್ಟಾರಿ, ಭಜನಾ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಉತ್ತಮ ಕುಮಾರ್ ಪಳನೀರು, ಪ್ರಮುಖರಾದ ದಿನೇಶ್ ಅಮ್ಟೂರು, ಸುಲೋಚನಾ ಜಿ.ಕೆ.ಭಟ್, ಯತಿನ್ ಕುಮಾರ್ ಮೊದಲಾದವರಿದ್ದರು.