ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹ

magadi
Published on

ಮಾಗಡಿ: ಕಾಡುಗೊಲ್ಲ ಸಮುದಾಯದವರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಸಮುದಾಯದ ನೂರಾರು ಮಂದಿ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರ್​ ಪ್ರಭಾಕರ್​ಗೆ ಮನವಿ ಸಲ್ಲಿಸಿದರು.

ತಾಲೂಕು ಕಾಡು ಗೊಲ್ಲರ ಸಂದ ಅಧ್ಯಕ್ಷ ಬಿ.ಡಿ.ಸುರೇಶ್​ ಮಾತನಾಡಿ, ಕಾಡು ಗೊಲ್ಲ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇದನ್ನು ಪರಿಗಣಿಸಿ ಸರ್ಕಾರ ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಗಣಿಸಿ ಕಾಡುಗೊಲ್ಲ ಜಾತಿ ಪ್ರಮಾಣ ನೀಡಬೇಕು. ಶಿರಾ ತಾಲೂಕಿನಲ್ಲಿ ಅಲ್ಲಿನ ಶಾಸಕ ಡಿ.ಬಿ.ಜಯಚಂದ್ರ ಅವರು ಸರಕಾರದ ಆದೇಶವನ್ನು ಅಧಿಕಾರಿಗಳ ಬಳಿ ಇಟ್ಟುಕೊಂಡು ಪ್ರತಿಯೊಬ್ಬರಿಗೂ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಕೊಡಿಸಿದ್ದಾರೆ. ಅದೇ ರೀತಿ ಇಲ್ಲಿನ ಶಾಸಕ ಎಚ್​.ಸಿ.ಬಾಲಕೃಷ್ಣ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಮನವಿ ಮಾಡಿದರು.

ಹಾಸನ, ಮಂಡ್ಯ, ದಾವಣಗೆರೆ, ತುಮಕುರು ಸೇರಿ ರಾಜ್ಯದೆಲ್ಲೆಡೆ ಕಾಡುಗೊಲ್ಲರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಬೆಂಗಳೂರು ದಣ ಜಿಲ್ಲೆಯಲ್ಲಿ ಏಕೆ ನೀಡುತ್ತಿಲ್ಲ. ಅಧಿಕಾರಿಗಳು ನಮಗೆ ಮಲತಾಯಿ ಧೋರಣೆ ತಾಳುವುದಾದರೂ ಏಕೆ. ಇದರಿಂದ ತಾಲೂಕಿನಲ್ಲಿ 30 ಕಾಡುಗೊಲ್ಲ ಹಟ್ಟಿಗಳು, 8,500 ಮತದಾರರಿದ್ದಾರೆ. 11 ಸಾವಿರ ಜನಸಂಖ್ಯೆ ಇದೆ. ನಮಗೆ ಅನ್ಯಾಯವಾಗಲು ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಬಿಡಬಾರದು ಎಂದು ಮನವಿ ಮಾಡಿದರು.

ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಜಾತಿ ಪ್ರಮಾಣ ಪತ್ರ ಅವಶ್ಯಕತೆ ಇದ್ದು, ಡಿ. ದೇವರಾಜ ಅರಸು, ಅಲೆಮಾರಿ ಅಭಿವೃದ್ದಿ ನಿಗಮ ಮಂಡಳಿಯಿಂದ ಸೌಲಭ್ಯ ಪಡೆಯಲು ಜು.2 ಕೊನೆಯ ದಿನವಾಗಿದೆ. ಅಷ್ಟರಲ್ಲಿ ನಮಗೆ ಕಾಡು ಗೊಲ್ಲ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಇಲ್ಲವಾದಲ್ಲಿ ಕುರಿ,ಮೇಕೆ, ಹಸುಗಳನ್ನು ತಾಲೂಕು ಕಚೇರಿ ಮುಂಭಾಗ ಕಟ್ಟಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ಮುಖಂಡ ದೊಡ್ಡಬಾಣಗೆರೆ ಮಾರಣ್ಣ ಮಾತನಾಡಿದರು.

ಸಮುದಾಯದ ಮುಖಂಡರಾದ ಶ್ರೀಪತಿಹಳ್ಳಿ ರಾಜಣ್ಣ, ಪ್ರಧಾನ ಅರ್ಚಕ ನಾರಾಯಣಪ್ಪ, ನಾಗರಾಜು, ಶಿವಣ್ಣ, ಸುರೇಶ್​, ಕೆಂಚಪ್ಪ, ಕೆಂಚಪ್ಪ, ವೀರಾಪುರ ನಾಗರಾಜು, ಪುಟ್ಟರಾಜು, ನವೀನ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net