

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವಂತೆಯೂ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದ ಮಾದರಿ ಕೈಬಿಡುವಂತೆಯೂ ಆಗ್ರಹಿಸಿ ಆರಂಭಗೊಂಡಿರುವ ಹೋರಾಟ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದ್ದು, ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸುವುದು ಸೇರಿದಂತೆ ಜಿಲ್ಲಾ ಮಟ್ಟದ ಬೃಹತ್ ರ‌್ಯಾಲಿ ಮೂಲಕ ಸರ್ಕಾರದ ಗಮನ ಸೆಳೆಯಲು ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ದಿಟ್ಟ ಹೆಜ್ಜೆಯನ್ನಿರಿಸಿದೆ.
ಸೆ. 6 ರಂದು ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದು, ಇದೇ ಸಮಯ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲು ಅವಕಾಶ ಕೋರಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಕೂಡ ಸಲ್ಲಿಸಲಾಗಿದ್ದು, ಸೀಮಿತ ಜನರನ್ನು ಸಿಎಂ ಭೇಟಿಗೆ ಅವಕಾಶ ಕಲ್ಪಿಸುವ ಭರವಸೆ ದೊರೆತಿದೆ ಎಂದು ಹೋರಾಟ ಸಮಿತಿಯ ಪ್ರಮುಖರು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಜಿಲ್ಲಾಸ್ಪತ್ರೆಯಲ್ಲಿ ಸಕಲ ಮೂಲ ಸೌಕರ್ಯಗಳಿದ್ದರೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇಬ್ಬರು ಸಚಿವರಿದ್ದರೂ ಸದನದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಕುರಿತು ಚಕಾರವೆತ್ತುತ್ತಿಲ್ಲ. ಬದಲಾಗಿ ಜಿಲ್ಲೆಯವರೇ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕೆಂಬ ಬೇಡಿಕೆ ಇರಿಸಿದ್ದಾರೆ. ಇದು ಸರ್ಕಾರಿ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯ. ಹಾಗಾದರೆ, ವಿಧಾನ ಸೌಧವಾಗಲಿ, ಆಡಳಿತ ವ್ಯವಸ್ಥೆಯನ್ನಾಗಲಿ ಖಾಸಗಿ ಸಹಭಾಗಿತ್ವಕ್ಕೆ ನೀಡಲು ಸಾಧ್ಯವೇ? ಎಂದು ಮುಖಂಡ ಅರವಿಂದ ಕುಲಕರ್ಣಿ ಪ್ರಶ್ನಿಸಿದರು.
ಈ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಲೇ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಅಸ್ತು ಎಂದಿದ್ದರು. ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದು ಜಿಲ್ಲಾಸ್ಪತ್ರೆಯನ್ನೇ ಬಳಸಿಕೊಂಡು ಸ್ವತಂತ್ರವಾಗಿ ಬೆಳೆದು ನಿಂತಿದೆ ಎಂದರೆ ಜಿಲ್ಲಾಸ್ಪತ್ರೆಯ ಮಹತ್ವ ಎಂಥದ್ದೆಂಬುದನ್ನು ಯೋಚಿಸಬೇಕು. ರಾಜ್ಯದಲ್ಲೇ ಮಾದರಿಯಾಗಿರುವ ಜಿಲ್ಲಾಸ್ಪತ್ರೆ ಖಾಸಗಿ ವೈದ್ಯಕೀಯ ಕಾಲೇಜ್‌ಗೆ ನೆರವಾಗುತ್ತದೆ ಎಂದರೆ ಅದೇ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಕಾಲೇಜ್ ಏಕೆ ಸ್ಥಾಪಿಸಬಾರದು? ಕಾಲೇಜ್‌ಗೆ ಅಡ್ಡಿಯಾದವರು ಯಾರು? ಎಂಬುದನ್ನು ಜನ ಅರಿತುಕೊಳ್ಳಬೇಕೆಂದು ಹಿರಿಯ ವಕೀಲಕ ಕೆ.ಎಫ್. ಅಂಕಲಗಿ ತಿಳಿಸಿದರು.
150ಕ್ಕೂ ಅಧಿಕ ಎಕರೆ ಜಾಗೆ ಹೊಂದಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಕಾಲೇಜ್ ಆರಂಭಿಸಲು ಬೇಕಾದ ಎಲ್ಲ ಸೌಲಭ್ಯಗಳಿವೆ. ಕೇವಲ ಬೋರ್ಡ್ ಹಾಕಿದರೆ ಸಾಕು. ಆದರೂ, ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆಯಿಂದಾಗಿ ವೈದ್ಯಕೀಯ ಕಾಲೇಜ್ ಮರೀಚಿಕೆಯಾಗಿದೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಕಾಲೇಜ್ ಖಾಸಗಿಯವರಿಗೆ ಮಾರಾಟ ಮಾಡಲು ಬಿಡಲ್ಲ ಎಂದ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ, ತ್ವರಿತವಾಗಿ ವೈದ್ಯಕೀಯ ಕಾಲೇಜ್ ಸ್ಥಾಪಿಸದೆ ಹೋದರೆ ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಬಿ.ಭಗವಾನ ರೆಡ್ಡಿ ಮಾತನಾಡಿ, ಆಳುವ ವರ್ಗ ಇಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಮಾರಾಟ ಮಾಡುತ್ತದೆಯಲ್ಲದೇ ಹೀಗೇ ಬಿಟ್ಟರೆ ಸರ್ಕಾರಿ ಆಸ್ಪತ್ರೆಯನ್ನೂ ಮಾರಾಟ ಮಾಡಿದರೆ ಅಚ್ಚರಿಯಿಲ್ಲ. ಬಡವರಿಗೆ ಆರೋಗ್ಯ ಮರೀಚಿಕೆಯಾಗಲಿದೆ. ಖಾಸಗೀಕರಣದಿಂದಾಗಿ ಸರ್ಕಾರಿ ವ್ಯವಸ್ಥೆಯೇ ಸಾಯಲಿದೆ. ಅದಕ್ಕೆ ಅವಕಾಶ ಕಲ್ಪಿಸಲು ಬಿಡಲ್ಲ ಎಂದರು.
ಮುಖಂಡ ಅಣ್ಣಾರಾಯ ಈಳಗೇರ, ಮಲ್ಲಿಕಾರ್ಜುನ ಬಟಗಿ, ಅನೀಲ ಹೊಸಮನಿ ಸೇರಿದಂತೆ ಹಲವು ನಾಯಕರು ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿ ವೈದ್ಯಕೀಯ ಆಸ್ಪತ್ರೆಗೆ ಅವಕಾಶ ಕಲ್ಪಿಸುವುದಿಲ್ಲ. ಅಲ್ಲದೇ, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಎಂಥದ್ದೇ ಹೋರಾಟಕ್ಕೆ ಸಿದ್ಧವೆಂದರಲ್ಲದೇ ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರ ಮೇಲೂ ಒತ್ತಡ ಹೇರಲಾಗುವುದೆಂದರು.
ಮುಖಂಡರಾದ ಅಕ್ರಂ ಮಾಶ್ಯಾಳಕರ, ಮಹಾದೇವ ಬನಸೋಡೆ, ಚನ್ನು ಕಟ್ಟಿಮನಿ ಮತ್ತಿತರರಿದ್ದರು.