ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ ಚುರುಕು, ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ, ‘ಪಿಪಿಪಿ’ ಬೇಡ-ಸರ್ಕಾರಿಯೇ ಇರಲಿ ಎಂದ ಹೋರಾಟಗಾರರು

MEDICAL COLLEGE MEETING
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆಯಲ್ಲದೇ ಹೋರಾಟ ಕೂಡ ಚುರುಕುಗೊಂಡಿದೆ. ಅಲ್ಲದೇ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಸ್ಥಾಪಿಸಬೇಕೆಂಬ ಸರ್ಕಾರದ ಪ್ರಸ್ತಾವನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಕುರಿತು ಪ್ರಸ್ತಾವನೆ ಇರಿಸಿದಂದಿನಿಂದ ಜನಾಕ್ರೋಶ ಭುಗಿಲೆದ್ದಿದ್ದು, ಯಾವುದೇ ಕಾರಣಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪಿಸಕೂಡದೆಂಬ ಕೂಗು ಬಲಗೊಂಡಿದೆ. ಈಗಾಗಲೇ ಹಲವು ಸಂಘಟನೆಗಳು, ಸಂಸ್ಥೆಗಳು, ಪ್ರಜ್ಞಾವಂತರು ಸರ್ಕಾರದ ಕ್ರಮ ಖಂಡಿಸಿದ್ದಲ್ಲದೇ, ತ್ವರಿತವಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದಾರೆ.

ಆದರೆ, ಈವರೆಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ದಿನದಿಂದ ದಿನಕ್ಕೆ ಹೋರಾಟ ಚುರುಕುಗೊಳಿಸಲು ಹಲವು ಸಂಘಟನೆಗಳು ಮುಂದಾಗಿದ್ದು, ಮಂಗವಾರವಷ್ಟೇ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವವರೆಗೂ ಹೋರಾಟ ಜೀವಂತವಾಗಿಡಲು ತೀರ್ಮಾನಿಸಿದ್ದು ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವೆಂದು ಸಂಕಲ್ಪಗೈದಿದ್ದಾರೆ.

ವಿದ್ಯಾರ್ಥಿಗಳು, ಬಡವರ ಕಲ್ಯಾಣಕ್ಕಾಗಿ ವೈದ್ಯಕೀಯ ಕಾಲೇಜ್‌ನ ಅವಶ್ಯಕತೆ ಇದ್ದು, ಮುಂದಿನ ಪೀಳಿಗೆಗಾಗಿ ವೈದ್ಯಕೀಯ ಕಾಲೇಜ್ ಕಾಣಿಕೆಯಾಗಿ ನೀಡಬೇಕಾದ ಜವಬ್ದಾರಿ ಎಲ್ಲರ ಮೇಲಿದೆ. ಇಲ್ಲದೇ ಹೋದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಒಂದೊಂದೇ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ. ಈಗಾಗಲೇ ಹಲವು ಸಂಸ್ಥೆಗಳನ್ನು ಮಾರಿಯಾಗಿದೆ. ಇದೀಗ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಾದರೂ ಉಳಿಸಿಕೊಳ್ಳೋಣ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿ.ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಅಣ್ಣಾರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಜಿ.ಜಿ. ಗಾಂಧಿ, ಚಂದ್ರಶೇಖರ ಘಂಟೆಪ್ಪಗೋಳ, ಸುಭಾಷ ಯಾದವಾಡ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ದಸ್ತಗಿರ ಉಕ್ಕಲಿ, ಭರತಕುಮಾರ ಎಚ್.ಟಿ, ಗೀತಾ ಎಚ್, ಬಾಬುರಾವ್ ಬೀರಕಬ್ಬಿ, ಸಿದ್ರಾಮ ಹಿರೇಮಠ, ಶ್ರೀಕಾಂತ ಕೊಂಡಗೂಳಿ, ಶಿವಬಾಳಮ್ಮ ಕೊಂಡಗೂಳಿ, ಫಯಾಜ್ ಕಲಾದಗಿ, ಕಾವೇರಿ ರಜಪೂತ, ಮಹಾದೇವಿ ಧರ್ಮಶೆಟ್ಟಿ, ಫಾದರ್ ಕೆಫಿನ್, ಜಗದೇವ್ ಸೂರ್ಯವಂಶಿ, ಸೋಮನಾಥ ಕಳ್ಳಿಮನಿ, ಬೋಗೇಶ್ ಸೋಲಾಪುರ, ಶಿವಾನಂದ ಸುತ್ತಗುಂಡಿ, ವಿದ್ಯಾವತಿ ಅಂಕಲಗಿ, ಅನಸೂಯ ಕಾಂಬಳೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net